ಮ೦ಗಳೂರು: ಫೆಬ್ರವರಿ 11 ರಿಂದ 15ರ ವರೆಗೆ ನಗರದ ಉರ್ವ ಬೋಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವ, ಹೊರೆ ಕಾಣಿಕೆ, ಚಂಡಿಕಾಯಾಗ, ವರ್ಷಾವಧಿ ಮಹಾಪೂಜೆ ಹಾಗೂ ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವವು ಭಾರೀ ವಿಜ್ರಂಭಣೆಯಿಂದ ನಡೆಯಲಿದ್ದು ಅವೆಲ್ಲದರ ಪೂರ್ವಸಿದ್ಧತಾ ದೃಷ್ಟಿಯಿಂದ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.
ಮಹಾನಗರ ಪಾಲಿಕೆ, ಆರೋಗ್ಯ, ಪೊಲೀಸ್, ಹಾಗೂ ಮೆಸ್ಕಾಂನ ಅಧಿಕಾರಿಗಳು ಉಪಸ್ಥಿತರಿದ್ದ ಈ ಸಭೆಯಲ್ಲಿ ಊರ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು ಸ್ವಚ್ಛತೆ, ನೀರಿನ ವ್ಯವಸ್ಥೆ, ಪಾರ್ಕಿಂಗ್, ಭದ್ರತೆ, ಟ್ರಾಫಿಕ್ ನಿರ್ವಹಣೆ, ವಿದ್ಯುತ್ ನಿರ್ವಹಣೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮ.ನ.ಪಾ ಸದಸ್ಯರಾದ ಗಣೇಶ್ ಕುಲಾಲ್, ಜಯಲಕ್ಷ್ಮಿ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾದ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷರಾದ ಕುಮಾರ್ ಮೆಂಡನ್ ಬೈಕಂಪಾಡಿ, ಆಡಳಿತ ಮೊಕ್ತೇಸರರು ಲಕ್ಷ್ಮಣ್ ಅಮೀನ್ ಕೋಡಿಕಲ್, ಭರತ್ ಉಳ್ಳಾಲ್, ಮೋಹನ್ ಬೆಂಗ್ರೆ, ಸುರೇಶ್ ಕುಂದರ್, ಮಾಧವ ಪುತ್ರನ್, ರಘುನಾಥ್ ಕೋಡಿಕಲ್, ರಾಹುಲ್ ಬೋಳೂರು ಮುಂತಾದವರು ಉಪಸ್ಥಿತರಿದ್ದರು.