ಮ೦ಗಳೂರು: ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷದ ಸಂಭ್ರಮಾಚರಣೆ ಸಂಭ್ರಮ್ 2025, ಮಾ. 16 ರಂದು ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್‌ನ ಶಹನಾಯಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.
2005ರಲ್ಲಿ ಮಂಗಳೂರಿನ ಪಂಪ್ ವೆಲ್‌ನಲ್ಲಿ ಸ್ಥಾಪನೆಯಾದ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಂಸ್ಥೆಯನ್ನು, ಆಂದಿನ ಸೇವಾದಳದ ಕಾರ್ಯದರ್ಶಿಯಾಗಿದ್ದ ಮತ್ತು ಈಗಿನ ಕರ್ನಾಟಕ ಸರ್ಕಾರದ ಸ್ಪೀಕರ್ ಆದ ಯು.ಟಿ. ಖಾದರ್ ಉದ್ಘಾಟಿಸಿದ್ದರು. ಕಳೆದ 20 ವರ್ಷಗಳ ಅವಧಿಯಲ್ಲಿ ಸಂಸ್ಥೆಯು ಕಂಪ್ಯೂಟರ್, ತಾಂತ್ರಿಕ, ಏವಿಯೇಶನ್, ಹಾಸ್ಪಿಟಾಲಿಟಿ, ಲೋಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಏರ್ಪೋರ್ಟ್ ಮ್ಯಾನೇಜ್ಮೆಂಟ್, ಕ್ಯಾಬಿನ್ ಕ್ರೂ ತರಬೇತಿ, ಇಂಗ್ಲಿಷ್ ತರಬೇತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹೆಸರಾಂತ ಸಂಸ್ಥೆಯಾಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಮುರಳಿ ಹೊಸಮಜಲು ಅವರ ಮಾತೃಶ್ರೀಯವರಾದ ದಿ. ಶ್ರೀಮತಿ ರಾಜಮ್ಮ ಅವರ ಸ್ಮರಣಾರ್ಥವಾಗಿ ‘ಶ್ರೀಮತಿ ರಾಜಮ್ಮ ಸ್ಮಾರಕ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್’ ಉದ್ಘಾಟನೆಯಾಯಿತು. ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಜನಿಸಿದ ಶ್ರೀಮತಿ ರಾಜಮ್ಮ, ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ದುರ್ಬಲ ಮಹಿಳೆಯರ ಹಾಗೂ ಬಡವರ ಹಕ್ಕುಗಳಿಗಾಗಿ ಶ್ರಮಿಸಿದ ಪ್ರಮುಖ ವ್ಯಕ್ತಿಯಾಗಿದ್ದರು. ಈ ಟ್ರಸ್ಟ್ ಯುವಕರು ಮತ್ತು ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದ್ದು, ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಸಂದರ್ಭ ಪತ್ರಿಕಾ ರಂಗದಲ್ಲಿ ಭಾಸ್ಕರ್ ರೈ, ಕಲಾ ಕ್ಷೇತ್ರದಲ್ಲಿ ವಿಪಿನ್ ಪುರುಷು, ಸಮಾಜ ಸೇವೆಯಲ್ಲಿ ಶಾರದ ಕದ್ರಿ ಮತ್ತು ಆಕಾಶ್ ಕರ್ಕೇರ, ಹಾಗೆಯೇ CDS ಪರೀಕ್ಷೆಯಲ್ಲಿ 100ನೇ ಶ್ರೇಣಿಯಲ್ಲಿ ಉತ್ತೀರ್ಣರಾದ ಅದ್ವೈತ್ ನಾರಾಯಣ್ ಅವರನ್ನು ಗೌರವಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುರಳಿ ಹೊಸಮಜಲು ವಹಿಸಿಕೊಂಡಿದ್ದು, ನಿರ್ದೇಶಕಿ ಸಜಿತಾ ಎಂ. ನಾಯರ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಸ೦ಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ , ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ರಮಾನಾಥ ರೈ, LAPT – UK ಸಂಸ್ಥೆಯ ಅಧ್ಯಕ್ಷ ವಿಜಯ್ ಭಾಗವಹಿಸಿದರು. ವಿಶೇಷ ಆಹ್ವಾನಿತರಾಗಿ ನಮ್ಮ ಕುಡ್ಲ 24×7 ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕದ್ರಿ ನವನೀತ್ ಶೆಟ್ಟಿ, ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಶ್ಜಯಂತ್ ಕೊಡ್ಕಣಿ, ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್, ನಟ ಮತ್ತು ನಿರ್ದೇಶಕ ಸ್ವರಾಜ್ ಶೆಟ್ಟಿ, ಚಲನಚಿತ್ರ ಹಾಗೂ ನಾಟಕ ಕಲಾವಿದೆ ಮಿಸ್ ರೂಪ ವರ್ಕಾಡಿ, ಸಂತ ಜಾರ್ಜ್ ಸಮೂಹ ಸಂಸ್ಥೆಗಳ ಮಾಜಿ ಪ್ರಾಂಶುಪಾಲ ಅಬ್ರಾಹಂ ವರ್ಗೀಸ್, ಕರ್ನಾಟಕ ಪಾಲಿಟೆಕ್ನಿಕ್ ಮಾಜಿ ಪ್ರಾಂಶುಪಾಲ ಡಾ. ಅಬ್ದುಲ್ ಖಾದರ್, ಮತ್ತು ವಕೀಲಪ್ರಸಾದ್ ರೈ ಭಾಗವಹಿಸಿದ್ದರು.
ಈ ಸಂಭ್ರಮಾಚರಣೆಯಲ್ಲಿ ಶಿಕ್ಷಣ ತಜ್ಞರು, ಕಾಲೇಜುಗಳ ಮುಖ್ಯಸ್ಥರು, ಮಾಧ್ಯಮ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.ಪ್ರಸಿದ್ಧ ಹಿನ್ನೆಲೆ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ಗಾಯಕಿ ರೂಪ ಪ್ರಕಾಶ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಶಿಕ್ಷಕಿ ಚೈತ್ರಾ ಸ್ವಾಗತಿಸಿ, ಶಿಕ್ಷಕಿ ಅವನಿ ಪಾರ್ವತಿ ವಂದಿಸಿದರು, ಮತ್ತು ಕಾರ್ಯಕ್ರಮವನ್ನು ಕದ್ರಿ ನವನೀತ್ ಶೆಟ್ಟಿ ಹಾಗೂ ಸಿಂಧು ಎನ್ ನಿರೂಪಿಸಿದರು.
