ಬಂಟ್ವಾಳ: ಸುದೀರ್ಘ ವರ್ಷಗಳ ಇತಿಹಾಸವನ್ನು ಹೊಂದಿರುವ ಅಮ್ಟೂರು ಗ್ರಾಮದ ಮೊಗರ್ನಾಡು ದೇವಮಾತಾ ಚರ್ಚಿನ 250ನೇ ವರ್ಷಾಚರಣೆಗೆ ಚರ್ಚ್ ನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ|ಫಾ| ವಿಲ್ರೆಡ್ ಪ್ರಕಾಶ್ ಡಿಸೋಜ ಅವರು ಚರ್ಚ್ ನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಚಾಲನೆ ನೀಡಿದರು.
ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ ಬರೋಬ್ಬರಿ 250 ಕ್ಯಾಂಡಲ್‌ಗಳನ್ನು ಅದೇ ಸಂಖ್ಯೆಯ ಆಕಾರದಲ್ಲಿ ಜೋಡಿಸಿ ಬೆಳಗಿಸಿ ಸಂಭ್ರಮಿಸಿದರು.
ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಅನಿಲ್ ಕೆನ್ಯುಟ್ ಡಿಮೆಲ್ಲೊ ಅವರು ವರ್ಷವಿಡೀ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ಅನಾವರಣಗೊಳಿಸಿದರು. ಆವರಣೆ ಹಾಗೂ ಕೃತಜ್ಞತೆಯಾಗಿ ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.
ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚಿನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಸರ್ವರೂ ಪಾಲ್ಗೊಂಡು ಮುಂಬರುವ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಸಹಕರಿಸಲು ವಿನಂತಿಸಲಾಯಿತು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಉಪಸ್ಥಿತರಿದ್ದರು.