ಮಂಗಳೂರು: ಜವಾಹರಲಾಲ್ ನೆಹರೂ ಅವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದು ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ಮಾಜಿ ಸಚಿವ ಬಿ.ರಮನಾಥ ರೈ ಹೇಳಿದ್ದಾರೆ.
ಬುಧವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ನೆಹರೂ ಅವರು ಪ್ರಧಾನಿಗಳಾಗಿದ್ದ 17 ವರ್ಷಗಳ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳು, ವಿಜ್ಞಾನ-ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಅಧ್ಯಯನ ಸಂಸ್ಥೆಗಳು, ಅಣೆಕಟ್ಟುಗಳು, ಆಸ್ಪತ್ರೆಗಳು, ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿದರು. ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ನೆಹರೂ ಅವರು ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳೇ ಕಾರಣ ಎಂದು ಸ್ಮರಿಸಿದರು.
ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಬಿಜೆಪಿ ಯಾವೊಬ್ಬ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ, ನೆಹರೂ ಕುಟುಂಬವನ್ನು ಅಪಪ್ರಚಾರ ನಡೆಸುತ್ತಾ ಅವರ ಕೊಡುಗೆ, ಇತಿಹಾಸ ಮರೆಮಾಚುವ ಪ್ರಯತ್ನ ಆಗುತ್ತಿದೆ. ದೇಶದ ಚರಿತ್ರೆಯಿಂದ ನೆಹರೂ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭ ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮುಖಂಡರಾದ ಸುರೇಂದ್ರ ಕಂಬಳಿ, ಆರ್.ಕೆ.ಪೃಥ್ವಿರಾಜ್, ಅಬ್ದುಲ್ ರವೂಫ್, ಜಯಶೀಲ ಅಡ್ಯಂತಾಯ, ಅಬ್ಬಾಸ್ ಅಲಿ, ಎಸ್.ಅಪ್ಪಿ, ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ಭಾಸ್ಕರ್ ರಾವ್, ವಿಕಾಸ್ ಶೆಟ್ಟಿ, ಶಬೀರ್.ಎಸ್, ಗಣೇಶ್ ಪೂಜಾರಿ, ಯೋಗಿಶ್ ಕುಮಾರ್, ಆರಿಫ್ ಬಾವಾ ಬಂದರ್, ದಿನೇಶ್ ಕುಂಪಲ, ರಮಾನಂದ ಪೂಜಾರಿ, ಸಬಿತಾ ಮಿಸ್ಕಿತ್, ನಮಿತಾ ಡಿ.ರಾವ್, ಮಂಜುಳಾ ನಾಯಕ್, ಚಂದ್ರಕಲಾ ಜೋಗಿ, ಚಂದ್ರಹಾಸ ಪೂಜಾರಿ, ಮಲ್ಲಿಕಾರ್ಜುನ ಕೋಡಿಕಲ್, ರವಿರಾಜ್ ಪೂಜಾರಿ, ಸಮರ್ಥ್ ಭಟ್, ನಝೀರ್ ಬಜಾಲ್ ಉಪಸ್ಥಿತರಿದ್ದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಜೋಕಿಂ ಡಿಸೋಜಾ ವಂದಿಸಿದರು.


