ಮಂಗಳೂರು: ಮನುಷ್ಯನಿಗೆ ಬದುಕಿನ ಕಷ್ಟದ ಸಂದರ್ಭದಲ್ಲಿ ಸದ್ಗುಣ ಇದ್ದಾಗ ಮಾನವೀಯತೆ ಜೀವಂತವಾಗಿರುತ್ತದೆ. ಅದೇ ಮನುಷ್ಯನಲ್ಲಿ ದುಶ್ಚಟಗಳು ಕೂಡಿಕೊಂಡಾಗ ಮಾನವೀಯತೆ ಮರೆಯಾಗುತ್ತಾ ಹೋಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕ ಸಿ. ಎ. ಶಾಂತರಾಮ್ ಶೆಟ್ಟಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಯುವ ರೆಡ್ ಕ್ರಾಸ್, ಎನ್.ಸಿ.ಸಿ. (ಭೂದಳ ಮತ್ತು ನೌಕಾದಳ), ಆಂತರಿಕ ಗುಣಮಟ್ಟ ಖಾತರಿಕೋಶ ಹಾಗೂ ಎಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದರು.ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಒಂದು ಬಾರಿಯಾದರೂ ರಕ್ತದಾನ ಮಾಡಿದರೆ ಸಾರ್ಥಕ. ಈ ರೀತಿಯ ಯಾವುದೇ ಸಮಾಜಮುಖಿ ಕಾರ್ಯಗಳಿಗೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಯುವ ರೆಡ್ ಕ್ರಾಸ್ ಎಂದಿಗೂ ಪ್ರೋತ್ಸಾಹಿಸಲಿದೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಮಾತನಾಡಿ, ಸೇವೆ ಮತ್ತುದಾನಕ್ಕೆ ಇರುವ ಒಂದೇ ಒಂದು ಅವಕಾಶ ರಕ್ತದಾನ. ಪುಣ್ಯ ಸಂಪಾದನೆ, ಆರೋಗ್ಯ ವೃದ್ಧಿ ಮತ್ತು ಮಾನಸಿಕ ತೃಪ್ತಿಗಾದರೂ ರಕ್ತದಾನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕೊರೋನಾ ಸಮಯದಲ್ಲಿ ಯುವ ರೆಡ್ ಕ್ರಾಸ್ ಮೂಲಕ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿನಡೆಸಿದ್ದೇವೆ. ರಕ್ತದಾನ ಶಿಬಿರ, ವ್ಯಾಕ್ಸಿನೇಷನ್ ಮತ್ತು ಇನ್ನಿತರೆ ಹಲವು ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ ಎಂದರು.
ವಿ.ವಿ. ಕಾಲೇಜಿನ ಕಾಲೇಜಿನ ವೈ.ಆರ್.ಸಿ. ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು. ಎನ್‌ಸಿಸಿ ಭೂದಳದ ಅಧಿಕಾರಿ ಡಾ. ಜಯರಾಜ್ ಎನ್. ಸ್ವಾಗತಿಸಿ, ಎನ್.ಸಿ.ಸಿ. ನೌಕಾದಳದ ಅಧಿಕಾರಿ ಪ್ರೊ. ಯತೀಶ್ ಕುಮಾರ್ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು ೧೧೬ ಘಟಕ ರಕ್ತದಾನ ಮಾಡಲಾಯಿತು.