ಮಂಗಳೂರು: ಸರ್ಕಾರದ ಮಹಾತ್ವಾಕಾಂಕ್ಷಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)’ (ವಿಬಿ-ಜಿ ರಾಮ್ ಜಿ) ಹೊಸ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಮುಕ್ತವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ ಕಾರ್ಬಾರಿ ಕರೆ ನೀಡಿದ್ದಾರೆ.
ಅವರು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ, ಜಿಲ್ಲೆಯ ಅನುಷ್ಠಾನ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ವಿಬಿ-ಜಿ ರಾಮ್ ಜಿ ಸಿಬ್ಬಂದಿಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ನಾಲ್ಕು ಅಧಿವೇಶನಗಳಲ್ಲಿ ತರಬೇತಿ
ಕಾರ್ಯಾಗಾರದಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಂಗಳೂರು ತಾ.ಪಂ. ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್ಲು, ಬಂಟ್ವಾಳ ತಾ.ಪಂ. ಸಹಾಯಕ ನಿರ್ದೇಶಕ ವಿಶ್ವನಾಥ್ ಬಿ., ಸುಳ್ಯ ತಾ.ಪಂ. ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಮೂಲ್ಕಿ ತಾ.ಪಂ. ಸಹಾಯಕ ನಿರ್ದೇಶಕ ಅರುಣ್ ಪ್ರದೀಪ್ ಡಿಸೋಜಾ ಅವರು ಯೋಜನೆಯ ಅನುಷ್ಠಾನದ ವಿವಿಧ ವಿಚಾರಗಳ ಕುರಿತು ನಾಲ್ಕು ಅಧಿವೇಶನಗಳಲ್ಲಿ ತರಬೇತಿ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೊಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.


