ಮಂಗಳೂರು: ಭಾರತದಲ್ಲಿ ಯುವ ಜನತೆ ಹೆಚ್ಚಾಗಿ ಧೂಮಪಾನ ಮತ್ತು ತಂಬಾಕಿನ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇಂತಹ ವ್ಯಸನಿಗಳಲ್ಲೇ ಹೆಚ್ಚಾಗಿ ಬಾಯಿ ಕ್ಯಾನ್ಸರ್ ಉಂಟಾಗುತ್ತಿದೆ. ಬಾಯಿ ಕ್ಯಾನ್ಸರ್‌ನಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಶ್ರೀನಿವಾಸ ವಿಜ್ಞಾನ ಸಂಸ್ಥೆಯ ದಂತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಚಾಂದಿನಿ ಎಸ್. ವಿಷಾದ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಆಂತರಿಕ ಮೌಲ್ಯಮಾಪನ ಖಾತರಿಕೋಶ, ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ವೇದಿಕೆ ಹಾಗೂ ಸೂಕ್ಷಾಣುಜೀವ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ,ಬಾಯಿ ಕ್ಯಾನ್ಸರ್ ಹಾಗೂ ಅದರ ತಡೆಗಟ್ಟುವಿಕೆ ಜಾಗೃತಿ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಇತ್ತೀಚಿಗೆ ಶೇ. 30ಕ್ಕಿಂತಲೂ ಹೆಚ್ಚಿನ ಜನರ ಸಾವು ಬಾಯಿ ಕ್ಯಾನ್ಸರ್‌ನಿಂದ ಉಂಟಾಗುತ್ತಿದೆ. ಶೇ. ೧೦ರಷ್ಟು ಮದ್ಯಪಾನ, ಶೇ. ೧೪ರಷ್ಟು ಜನರು ಧೂಮಪಾನದಿಂದಾಗಿ ಹಾಗೂ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಸಾವನ್ನುಪ್ಪುತ್ತಿರುವುದು ದುರಂತ. ಹಾಗಾಗಿ ಯುವ ಜನಾಂಗ ಮದ್ಯ ಸೇವನೆ, ಧೂಮಪಾನ ಹಾಗೂ ಮಾದಕವಸ್ತುಗಳ ಚಟಕ್ಕೆ ಬಲಿಯಾಗದೇ ಸ್ವಚ್ಛ ಜೀವನ ನಡೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಒತ್ತಡದ ಬದುಕಿನ ಇಂದಿನ ದಿನ ಮಾನಸದಲ್ಲಿ ಯುವ ಜನಾಂಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು..