21.4 C
Karnataka
Tuesday, December 3, 2024

ರವಿಕೆ ಪ್ರಸಂಗ ಸಿನಿಮಾ ಶೀಘ್ರದಲ್ಲಿ ಬಿಡುಗಡೆ

ಮ೦ಗಳೂರು:ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರತಂಡ ‘ರವಿಕೆ ಥೀಮ್’ ಬಿಡುಗಡೆ ಮಾಡಿದ್ದು, ಈ ಥೀಮ್‌ಗೆ ಸೋಶಿಯಲ್ ಮೀಡಿಯಾ ದಲ್ಲಿ ಅನೇಕರು ರೀಲ್ಸ್ ಶಾರ್ಟ್ಸ್ ಮಾಡುತ್ತಿದ್ದು, ಚಿತ್ರತಂಡ ಖುಷಿಯಾಗಿದೆ. ಸಂತೋಷ ಕೊಡಂಕೇರಿ ಈ ಚಿತ್ರವನ್ನು ನಿರ್ದೇಶಿಸಿದ್ದು, ‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಝೇಂಕಾರ್ ಮ್ಯೂಸಿಕ್ ಚಿತ್ರದ ಆಡಿಯೋ ರೈಟ್ಸ್ ಪಡೆದಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ.

ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ
ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀ ಕರಣ ನಡೆದಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದೆ. ಸಿನಿಮಾವನ್ನು ಸೆನ್ಸಾರ್ ಗೆ ಕಳುಹಿಸಲು ತಯಾರಿ ನಡೆಯುತ್ತಿದೆ.
ಸಿನಿಮಾ ಕಥೆಯ ಮೂಲಕ ಕೇವಲ ಒಂದು ಸಂದೇಶ ನೀಡಿದರೆ ಸಾಲದು. ನೋಡಿದವರಿಗೆ ಆ ಚಿತ್ರ ತಮ್ಮದೆ, ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು. ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ. ಆದರೆ ಆ ರವಿಕೆಯಿಂದಲೇ ರವಿಕೆಯೊಳಗಿನ ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಅದೆಷ್ಟೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಹಾಗೂ ಇಂತಹ ಸ್ಥಿತಿಯನ್ನು ಅನುಭವಿಸಿರುವ ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ ತುಂಬಬೇಕು ಎನ್ನುವ ಹಂಬಲ ಚಿತ್ರ ತಂಡದ್ದು.


ಮದ್ಯಮ ವರ್ಗದ ಕುಟುಂಬವೊಂದು ಗ್ರಾಮೀಣ ಸೊಗಡಿನಲ್ಲಿ ಇರುವ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪ್ರದಾಯದ ಜೊತೆಗೆ ಹಾಸ್ಯದ ಸ್ಪರ್ಷವನ್ನು ದಕ್ಷಿಣ ಕರ್ನಾಟಕದ ಭಾಷೆಯನ್ನೆ ವಿಭಿನ್ನವಾಗಿ ತೋರಿಸುವ ಮೂಲಕ ಭಾಷಾ ಹಾಗೂ ಆಹಾರ ಸಂಸ್ಕೃತಿಯನ್ನು ಕೂಡ ರವಿಕೆ ಪ್ರಸಂಗದಲ್ಲಿ ಸೂಕ್ಷ್ಮವಾಗಿ ತೋರಿಲಾಗಿದೆ. ಒಬ್ಬ ಟೈಲರ್ ಅಂಗಡಿಯಿಂದ ಆರಂಭವಾದ ಈ ರವಿಕೆ ಪ್ರಸಂಗ ಕೋರ್ಟ್ ಮೆಟ್ಟಿಲೇರಿದಾಗ ಅದಕ್ಕೆ ಸಮಾಜ ಹೆಣ್ಣನ್ನು ನೋಡುವ ಪರಿಯೇ ಈ ಚಿತ್ರದ ಎಳೆಯಾಗಿದೆ.
ರವಿಕೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗದ ಮೂಲಕ ಪ್ರಯೋಗಶೀಲತೆಯ ತಂಡದಿಂದ ಶೀಘ್ರವೆ ರವಿಕೆ ಪ್ರಸಂಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇಡೀ ಸಿನಿಮಾ ರವಿಕೆ ವಿಚಾರವಾಗಿ ಹತ್ತ-ಹಲವು ಚರ್ಚೆಗಳನ್ನು ಹುಟ್ಟು ಹಾಕುವ ಜೊತೆಗೆ ಮಹಿಳೆಯ ಮಾನಸಿಕ ವೇದನೆ ಹಾಗೂ ಆಕೆಯ ಕನಸುಗಳಿಗಾದ ನಿರಾಶೆ, ಹೋರಾಟದ ಛಲ, ಸಮಾಜ ಆಕೆಯನ್ನು ಕಾಣುವ ರೀತಿ ಹೀಗೆ ಹಲವಾರು ವಿಚಾರಗಳನ್ನು ರವಿಕೆ ಸುತ್ತ ಸುತ್ತುವರೆಯುತ್ತವೆ. ಹಕ್ಕಿಗಾಗಿ ಹೋರಾಟ, ಸಮಸಮಾಜದ ಸಂದೇಶ, ಮಹಿಳೆ ಸಂವೇದನೆ ಹೀಗೆ ಸಮಾಜಕ್ಕೊಂದು ಸಂದೇಶವನ್ನು ರವಿಕೆ ಪ್ರಸಂಗ ನೀಡಲಿದೆ.
ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುವ ಜೊತೆಗೆ ಸಿನಿಮಾ ಕುರಿತು ಸಿನಿ ಪ್ರೀಯರಲ್ಲಿ ಹಲವು ನಿರೀಕ್ಷೆ ಮೂಡಿಸಿದೆ.
ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್ ಬ್ಯಾನರ್ ಜೊತೆಗೆ ಶಾಂತಾನು ಮಹರ್ಷಿ, ನಿರಂಜನಗೌಡ, ಗಿರೀಶ್ ಎಸ್.ಎಮ್, ಶಿವರುದ್ರಯ್ಯ ಎಸ್.ವಿ ಅವರು ಬಂಡವಾಳ ಹೂಡಿದ್ದಾರೆ. ಕಥೆ ಮತ್ತು ಸಂಭಾಷಣೆ ಪತ್ರಕರ್ತೆ ಪಾವನಾ ಸಂತೋಷ ಅವರದ್ದು. ಚಿತ್ರಕಥೆ ನಿರ್ಮಿಸಿ ಚಿತ್ರಕ್ಕೆ ಸಂತೋಷ ಕೊಡಂಕೇರಿ ಆ‌್ಯಕ್ಷನ್ ಕಟ್ ಹೇಳಿದ್ದಾರೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ, ಪದ್ಮಜಾ ರಾವ್, ರಾಕೇಶ್ ಮೈಯ್ಯ, ರಘು ಪಾಂಡೇಶ್ವರ, ಸಂಪತ್ ಮೈತ್ರಿಯಾ, ಕೃಷ್ಣಮೂರ್ತಿ ಕವತಾರ, ಹನಮಂತರಾವ್ ಕೌಜಲಗಿ, ಹನುಮಂತೇಗೌಡ್ರು, ಪ್ರವೀಣ್ ಅಥರ್ವ, ಮೀನಾ ಸೇರಿದಂತೆ ಹಲವಾರು ಕಲಾವಿದರ ತಂಡ ಈ ಚಿತ್ರದಲ್ಲಿ ಅಭಿನಯಿಸಿದೆ.ವಿನಯ್ ಶರ್ಮಾ ಸಂಗೀತ ನಿರ್ದೇಶನ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ, ಚೈತ್ರಾ ಎಚ್.ಜಿ, ಜೋಗಿ ಸುನೀತಾ, ಮಾನಸಾ ಹೊಳ್ಳ, ಚೇತನ್ ನಾಯಕ ಅವರು ಚಿತ್ರದ ಗೀತೆಗೆ ಸ್ವರ ನೀಡಿದ್ದಾರೆ. ಮುರಳಿಧರ್ ಎನ್. ಅವರ ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ. ಸಂಕಲನಕಾರರಾಗಿ ರಘು ಶಿವರಾಮ್ ಕಾರ್ಯನಿರ್ವಹಿಸಿದ್ದಾರೆ.
ಚಿತ್ರದ ಟೈಟಲ್ ಸಾಂಗ್ ಝಂಕಾರ್ ಮ್ಯೂಸಿಕ್ ಈಗಾಗಲೇ ಬಿಡುಗಡೆಯಾಗಿದ್ದು, ಜನಮನ ಸೆಳೆಯುತ್ತಿದೆ. ಚಿತ್ರ ನೋಡಿದ ಮೇಲೆ ಸಿನಿಪ್ರೀಯರು ನಿರಾಶರಾಗದೆ ಏನೋ ಒಂದು ಸಂತೃಪ್ತಿಯಿಂದ ಮರಳಬೇಕು ಎನ್ನುವ ಉದ್ದೇಶ ಚಿತ್ರತಂಡದ್ದು. ಹೀಗಾಗಿ ಇಡೀ ಚಿತ್ರದ ಮೌಲ್ಯದಲ್ಲಿ ಸ್ವಲ್ಪವೂ ಕೂಡ ಹೊಂದಾಣಿಕೆಯಾಗದಂತೆ ಬಹಳಷ್ಟು ಜಾಗೃತಿ ಮತ್ತು ಕಾಳಜಿಯಿಂದ ಚಿತ್ರ ನಿರ್ಮಿಸಲಾಗಿದೆ‌.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ದೃಷ್ಟಿ ಮಿಡಿಯಾ ಪ್ರೊಡಕ್ಷನ್ ಹೌಸ್ ತನ್ನನ್ನು ತಾನು ತೊಡಗಿಸಿಕೊಂಡಿದೆ. ನಿರಂತರ ಹೊಸತನದತ್ತ ತನ್ನ ಯೋಚಿಸುವ ಈ ತಂಡ, ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles