ಮಂಗಳೂರು:ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಶುಕ್ರವಾರ ನಗರದ ಬಂಟ್ಸ್ ಹಾಸ್ಟೆಲ್‍ನಲ್ಲಿರುವ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿ ವಿದ್ಯಾರ್ಥಿಗೆ ಪ್ರತಿಭಾ ಕಾರಂಜಿಯ ಅವಶ್ಯಕತೆ ಇದೆ. ಇದು ಮಕ್ಕಳಲ್ಲಿರುವ ಬೇರೆ ಬೇರೆ ರೀತಿಯ ಕಲೆಗಳನ್ನು ಪ್ರದರ್ಶಿಸಲು ಅವರ ಕಲಾಭಿರುಚಿಯ ಸಾಮಥ್ಯ೯ವನ್ನು ಸಾಬೀತು ಮಾಡಲು ಇದೊಂದು ಒಳ್ಳೆಯ ವೇದಿಕೆಯಾಗಿದೆ. ಇಂದು 700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಕಾರ್ಯಕ್ರಮದಿಂದ ಮಕ್ಕಳ ಉದಯೋನ್ಮುಖ ಪ್ರತಿಭೆ ದೀಪದಂತೆ ಬೆಳಗಲಿ ಎಂದು ಶುಭ ಹಾರೈಸಿದರು.
ಎಂದರು.
ಮೇಯರ್ ಸುಧೀರ್ ಶೆಟ್ಟಿ ಮಾತನಾಡುತ್ತಾ ಸೋಲು-ಗೆಲುವಿನ ಬಗ್ಗೆ ಯೋಚಿಸದೇ ಸ್ಪರ್ಧೆಗಳಲ್ಲಿ ಎಲ್ಲಾ ಮಕ್ಕಳು ಭಾಗವಹಿಸಬೇಕು. ಆಧುನಿಕ ಯುಗದಲ್ಲಿ ಸ್ಪರ್ಧೆ ಎದುರಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಅಗತ್ಯ ಆದ್ದರಿಂದ ಎಲ್ಲಾ ಮಕ್ಕಳು ಪ್ರತಿಭಾ ಕಾರಂಜಿಯ ಉದ್ದೇಶ ಮತ್ತು ಅದರ ಮಹತ್ವವನ್ನು ತಿಳಿದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಯಾನಂದ ಆರ್. ನಾಯಕ್, ರಾಮಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ಡಾ. ಬಿ. ಸಂಜೀವ ರೈ, ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಕೆ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಸ್ವಾಗತಿಸಿದರು.ನಂತರ ವಿದ್ಯಾರ್ಥಿಗಳ ವಿವಿಧ ಪ್ರತಿಭಾ ಸ್ಪರ್ಧೆಗಳು ನಡೆಯಿತು.