19.9 C
Karnataka
Friday, November 15, 2024

ಡಾ. ಬಿ. ಯಶೋವರ್ಮ ಸಂಸ್ಮರಣೆ- ಯಶೋಭಿವ್ಯಕ್ತಿ

ಮಂಗಳೂರು: ಹೊಗಳಿಕೆಗೆ ಹಿಗ್ಗದೆ ಟೀಕೆಗೆ ಜಗ್ಗದೆ ಮೌಲ್ಯಾಧಾರಿತ ಶಿಸ್ತಿನ ಜೀವನ ನಡೆಸಿದ ಸಹೋದರನಂತಿದ್ದ ಡಾ. ಬಿ
ಯಶೋವರ್ಮ ಅವರು ನಮಗೆ ಶ್ರೇಷ್ಠ ಜೀವನ ಮಾದರಿಯನ್ನು ಬಿಟ್ಟು ಹೋಗಿದ್ದಾರೆ, ಎಂದು ಮೂಡಬಿದಿರೆಯ ಆಳ್ವಾಸ್‌
ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು.
ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ
ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಸಂಘ ಇವರ ಜಂಟಿ ಸಹಯೋಗದಲ್ಲಿ
ಆಯೋಜಿಸಲಾಗಿದ್ದ ಡಾ. ಬಿ. ಯಶೋವರ್ಮ ಸಂಸ್ಮರಣೆ ಯಶೋಭಿವ್ಯಕ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಅವರು, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಏರಿಸುವ ಅವರ ಪ್ರಯತ್ನ, ಆದರ್ಶ ಜೀವನದ ಪಾಠಗಳನ್ನು ನಾವು
ಮುಂದುವರಿಸಿದರೆ ಮಾತ್ರ ನಾವು ಅವರ ನಿಜವಾದ ಸಂಸ್ಮರಣೆ ಮಾಡಿದಂತಾಗುತ್ತದೆ, ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ತಮ್ಮ ಸಂಸ್ಕರಣ ನುಡಿ ಮತ್ತು ವಿಶೇಷ
ಉಪನ್ಯಾಸದಲ್ಲಿ, ಉಜಿರೆಯ ಎಸ್‌.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಬೆಳೆಯಲು ಡಾ. ಬಿ. ಯಶೋವರ್ಮ
ಅವರೇ ಕಾರಣ. ಅವರ ವ್ಯಕ್ತಿತ್ವದಲ್ಲಿ ಕನಸು, ದೂರದೃಷ್ಟಿ, ಅಪರೂಪದ ಹಾಸ್ಯಪ್ರಜ್ಞೆಯಿತ್ತು, ಎಂದು ನೆನಪಿಸಿಕೊಂಡರು.
ಇದೇ ವೇಳೆ ಅವರು ಯಶೋವರ್ಮ ಅವರ ಕುರಿತು ಸ್ವರಚಿತ ಕವನ ವಾಚಿಸಿದರು.
ಬೆಂಗಳೂರಿನ ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್ ಮಾತನಾಡಿ, ಯಶೋವರ್ಮ ಯಾರಿಗೂ ಕೇಡು ಬಯಸದೆ ಜೀವನದ
ಪ್ರತಿ ಕ್ಷಣವನ್ನು ಆನಂದಿಸಿದರು. ಅವರೊಬ್ಬ ಅಗಾಧ ನೆನಪು ಶಕ್ತಿಯಿದ್ದ, ಎಲ್ಲಾ ವಿಷಯಗಳಲ್ಲೂ ಆಸಕ್ತಿಯಿದ್ದ, ಅತ್ಯುತ್ತಮ
ಓದುಗ. ಪುಸ್ತಕಗಳನ್ನು ಬೇಗನೆ ಓದಿ ಮುಗಿಸುವುದಲ್ಲದೆ, ಓದಿದ ವಿಷಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ತಮ್ಮ ತಾಯಿಗೆ
ಯಶೋವರ್ಮ ಅವರು ತಮ್ಮನಷ್ಟೇ ಅಲ್ಲದೆ ಒಬ್ಬ ಗೆಳೆಯ, ಮಗನಂತಿದ್ದರು, ಎಂದು ನೆನಪಿಸಿಕೊಂಡರು. ಉಜಿರೆಯ
ಎಸ್‌.ಡಿ.ಎಂ ಎಜ್ಯುಕೇಶನಲ್‌ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್‌, ಯಶೋವರ್ಮ ಯೋಚನೆ, ಯೋಜನೆ,
ಅನುಷ್ಠಾನ ಜೊತೆಗೆ ವಿಮರ್ಶೆ ಮಾಡುತ್ತಿದ್ದರು. ಪ್ರತಿ ಕೆಲಸದಲ್ಲೂ ಮೌಲ್ಯವರ್ಧನೆ ಅವರ ಗುರಿಯಾಗಿತ್ತು, ಎಂದರು.
ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಎಲ್‌ ಧರ್ಮ ಮಾತನಾಡಿ, ವಿಶ್ವವಿದ್ಯಾನಿಲಯಗಳ
ಅಭಿವೃದ್ಧಿಯಲ್ಲೂ ಯಶೋವರ್ಮ ಪ್ರಮುಖ ಪಾತ್ರ ವಹಿಸಿದ್ದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ತಮ್ಮ
ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುತ್ತಿದ್ದರು. ಅವರ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಮೇಲಿನ ಹಿಡಿತ, ವಿಷಯ
ಜ್ಞಾನ ಬೆರಗು ಮೂಡಿಸುತ್ತಿತ್ತು, ಎಂದರು. ಎಸ್‌.ಡಿ.ಎಂ ಸೊಸೈಟಿ (ಉಜಿರೆ) ಐಟಿ ಮತ್ತು ವಸತಿ ನಿಲಯಗಳ ಆಡಳಿತ
ವಿಭಾಗದ ಸಿ.ಇ.ಒ ಪೂರನ್‌ ವರ್ಮ, ತಮ್ಮ ತಂದೆಗೆ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳೇ ಪ್ರಪಂಚವಾಗಿತ್ತು. ಹಾಗೆಂದು
ನಮ್ಮನ್ನು ಮರೆಯಲಿಲ್ಲ. ನಮಗೂ ಅದರಲ್ಲಿ ಆಸಕ್ತಿ ಬರುವಂತೆ ಮಾಡುತ್ತಿದ್ದರು. ವಿದ್ಯಾರ್ಥಿಗಳನ್ನು ಅವರು ಅಪಾರವಾಗಿ
ಪ್ರೀತಿಸುತ್ತಿದ್ದರು, ಎಂದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್‌ ಮಾತನಾಡಿ, ಡಾ. ಬಿ.
ಯಶೋವರ್ಮ ಅವರು ತೆರೆಮರೆಯ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ, ನಿರಂತರವಾಗಿ ಕಾರ್ಯಕ್ರಮಗಳು
ನಡೆಯುತ್ತಿರುವಂತೆ ನೋಡಿಕೊಂಡರು, ಎಂದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ
ಹೆಗ್ಗಡೆಯವರು ಕಳಿಸಿದ್ದ ಶುಭ ಸಂದೇಶವನ್ನು ಓದಲಾಯಿತು.
ಶ್ರೀಮತಿ ಸೋನಿಯಾ ವರ್ಮ, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮೊದಲಾದವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು. ಕ.ಸಾ.ಪ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ ಪ್ರಾಸ್ತಾವಿಕವಾಗಿ

ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿವಿ ಕಾಲೇಜಿನ ಲಲಿತ ಕಲಾ ಸಂಘದ ಕಾರ್ಯದರ್ಶಿ ವಿಕಾಸ್‌ ರಾಜ್‌ ಓ.
ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಸ್ಪೀಡ್‌ ಪೈಂಟರ್‌ ವಿಲಾಸ್‌
ನಾಯಕ್‌ ಅವರ ವಿಶೇಷ ಚಿತ್ರಕಲೆಯ ವೀಡಿಯೋ ಪ್ರದರ್ಶನ ನಡೆಯಿತು.
ಕವಿಗೋಷ್ಠಿ
ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ
ವಹಿಸಿದ್ದರು. ಬಳಿಕ ನಡೆದ ʼಯಶೋಭಿವ್ಯಕ್ತಿʼ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧ. ಮಂ. ಕಾಲೇಜಿನ ರಂಗ ತರಬೇತಿ ಕೇಂದ್ರದ
ವಿದ್ಯಾರ್ಥಿಗಳು ನಡೆಸಿಕೊಟ್ಟ ʼಬೇಂದ್ರೆ ಅಂದ್ರೆʼ ಎಂಬ ರಂಗ ಪ್ರಸ್ತುತಿ ವೀಕ್ಷಕರ ಮೆಚ್ಚುಗೆ ಗಳಿಸಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles