ಮ೦ಗಳೂರು: ನಗರದ ಶ್ರೀನಿವಾಸ್ ಹೋಟೆಲ್ ನಿಂದ ವಿಮಲೇಶ್ ಬಿಲ್ಡಿಂಗ್ ವರೆಗಿನ ರಸ್ತೆ ಅಗಲೀಕರಣ ಮತ್ತು ಚರಂಡಿ ಅಭಿವೃದ್ಧಿ ವಿಷಯದಲ್ಲಿ ಉಂಟಾಗಿದ್ದ ಅನೇಕ ವರ್ಷಗಳ ಸಮಸ್ಯೆ ಕೊನೆಗೂ ಬಗೆಹರಿದಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರ ವಿಶೇಷ ಮುತುವರ್ಜಿ ಹಾಗೂ ನೇತೃತ್ವಕ್ಕೆ ಮನ್ನಣೆ ದೊರೆತಿದೆ.
ನಗರದ ಸೆಂಟ್ರಲ್ ವಾರ್ಡಿನ ಜಿ.ಎಚ್.ಎಸ್ ರಸ್ತೆಯ ಭಾಗದಲ್ಲಿರುವ ಆಶೀರ್ವಾದ್ ಬಿಲ್ಡಿಂಗ್ ಮಾಲೀಕರು ಈವರೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಬಾರಿ ಮನವಿ ಮಾಡಿದ್ದರೂ ರಸ್ತೆ ಅಗಲೀಕರಣಕ್ಕೆ ತಮ್ಮ ಬಿಲ್ಡಿಂಗ್ ತೆರವುಗೊಳಿಸಲು ಒಪ್ಪದೇ ಇದ್ದದ್ದು ಇಡೀ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಗಿತ್ತು. ಈ ಪ್ರದೇಶವು ಶೈಕ್ಷಣಿಕ ಕೇಂದ್ರ, ಆಸ್ಪತ್ರೆ ಹಾಗೂ ದೇವಸ್ಥಾನಗಳಿಂದ ಕೂಡಿದ್ದು ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಅತೀವ ತೊಂದರೆಯಾಗುತ್ತಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಳ ಬಿಟ್ಟು ಕೊಟ್ಟು ರಸ್ತೆ ಅಗಲೀಕರಣಕ್ಕೆ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನಪಾ ಸದಸ್ಯೆ ಪೂರ್ಣಮಾ ಅವರು ಬಿಲ್ಡಿಂಗ್ ಮಾಲೀಕರಲ್ಲಿ ಅನೇಕ ಬಾರಿ ಮನವಿ ಮಾಡಿದ್ದಲ್ಲದೇ ಕೊನೆಗೆ ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು.
ಅದರಂತೆ ಶಾಸಕರು ಮಾತುಕತೆ ನಡೆಸಿ ಮನವೊಲಿಸಿದ ಪರಿಣಾಮ ಬಿಲ್ಡಿಂಗ್ ಮಾಲೀಕರು ಜಾಗ ಬಿಟ್ಟು ಕೊಡಲು ಒಪ್ಪಿಗೆ ಸೂಚಿಸಿದ್ದು, ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಹಾಗೂ ಮನಪಾ ಅಧಿಕಾರಿಗಳು, ನಗರ ಯೋಜನಾಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಯೋಜನೆಗಳನ್ನು ಸಿದ್ದಪಡಿಸಿದರು. ಈ ಮೂಲಕ ಅನೇಕ ವರ್ಷಗಳಿಂದ ಬಗೆಹರಿಯದಿದ್ದ ಸಮಸ್ಯೆ ಬಗೆಹರಿದಂತಾಗಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರ ಕಾರ್ಯಶೈಲಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಅವರ ಸತತ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಸಾರ್ವಜನಿಕ ಉದ್ದೇಶಕ್ಕಾಗಿ ಸ್ಥಳ ಬಿಟ್ಟುಕೊಟ್ಟ ಮಾಲೀಕರಿಗೆ ಶಾಸಕರು ಹಾಗೂ ಪಾಲಿಕೆ ಸದಸ್ಯೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಸಮುದಾಯದ ರೋಷನ್ ರೆನಾಲ್ಡ್ ಅವರು ಸಹಕರಿಸಿದ್ದು, ರೈಟ್.ರೆವ್. ಹೇಮಚಂದ್ರ ಕುಮಾರ್ ಬಿಷಪ್ ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯ ಮತ್ತು ವಿನ್ಸೆಂಟ್ ಪಾಲನ್ನ ಖಜಾಂಜಿ ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯ ಉಪಸ್ಥಿತರಿದ್ದರು.