ಮಂಗಳೂರು: ಸರ್ಕಾರದ ವಿವಿಧ ಫಲಾನುಭವಿಗಳ ಆಧಾರಿತ ಯೋಜನೆಗಳ ಕೆಲವು ಫಲಾನುಭವಿಗಳು ತೀರಿ ಹೋಗಿದ್ದರೂ, ಅವರ ಸೌಲಭ್ಯ ಮುಂದುವರಿಯುತ್ತಿರುವ ಬಗ್ಗೆ ಹಲವು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಆಗಿಂದಾಗ್ಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಯೋಜನೆ ಮತ್ತು ಆರ್ಥಿಕ ಇಲಾಖೆ ಕಾರ್ಯದರ್ಶಿ ವಿಶಾಲ್ ಅವರು ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.ಪಿಂಚಣಿ, ಗ್ಯಾರಂಟಿ, ಉದ್ಯೋಗ ಖಾತ್ರಿ, ಪಿ.ಎಂ ಕಿಸಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಂತೆ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಫಲಾನುಭವಿ ಬದುಕಿರುವ ತನಕ ಯೋಜನೆಯ ಲಾಭ ಸಿಗಲಿದೆ. ಆದರೆ ಕೆಲ ಫಲಾನುಭವಿಗಳು ತೀರಿ ಹೋಗಿದ್ದರೂ ಅವರ ಕುಟುಂಬದವರು, ಅದನ್ನು ಮುಚ್ಚಿಟ್ಟು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಗಿಂದಾಗೆ ತಪಾಸಣೆ ನಡೆಸಿ ಯೋಜನೆಯ ದುರುಪಯೋಗ ತಡೆಗಟ್ಟಬೇಕು ಎಂದು ಅವರು ಸೂಚಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆದಾರರಿಗೆ ಕಡಿಮೆ ಪ್ರೀಮಿಯಂಗೆ ದೊಡ್ಡ ಮೊತ್ತದ ವಿಮಾ ಸೌಲಭ್ಯ ಸಿಗುತ್ತಿದೆ. ವಿವಿಧ ಕಚೇರಿಗಳಲ್ಲಿ ಇರುವ ಹೊರಗುತ್ತಿಗೆ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಇದರ ಅರಿವು ಮೂಡಿಸುವಂತೆ ಅವರು ತಿಳಿಸಿದರು.
ಕಂದಾಯ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು, ಅಗತ್ಯವಿದ್ದರೆ ಅನುಭವಿ ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಅವರು ತಿಳಿಸಿದರು.
ಕುಡಿಯುವ ನೀರಿನ ಯೋಜನೆಗಳಲ್ಲಿ ನೀರಿನ ಮೂಲ ದೃಢಪಟ್ಟ ನಂತರವೇ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಬೇಕು ನೀರು ಸಂಗ್ರಹಕ್ಕೆ ಹೆಚ್ಚುವರಿ ಜಮೀನು ಅಗತ್ಯವಿದ್ದರೆ ನೆಲ ಬಾಡಿಗೆ ಆಧಾರದಲ್ಲಿ ಪಡೆಯಲು ಪರಿಶೀಲಿಸಲು ವಿಶಾಲ್ ತಿಳಿಸಿದರು.ಮಂಗಳೂರು ನಗರದಲ್ಲಿ ಹೊಸದಾಗಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ವಿಶಾಲ್ ತಿಳಿಸಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಮಕ್ಕಳ ಹಲ್ಲು, ಕಣ್ಣು, ಕಿವಿ, ಮೂಗು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.ನರ್ಸರಿ ಎಲ್.ಕೆ.ಜಿ, ಯು.ಕೆ.ಜಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಂದಣಿ ಅಧಿಕಾರಿಯಾಗಿದ್ದಾರೆ. ಈ ಶಾಲೆಗಳಲ್ಲಿ ಮಕ್ಕಳ ಮಾಹಿತಿ ಅವರಲ್ಲಿರಬೇಕು. ಹುಟ್ಟಿದ ಮಗುವಿನಿಂದ ಆರು ವರ್ಷದವರೆಗಿನ ಮಕ್ಕಳ ಮಾಹಿತಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಇರಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ., ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಮುಂತಾದವರು ಉಪಸ್ಥಿತರಿದ್ದರು.