ಮಂಗಳೂರು: ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಮಾರುಕಟ್ಟೆಗೆ ಸೂಕ್ತವಾದ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪಠ್ಯಮತ್ತು ಪಠ್ಯೇತರ ಚಟುವಟಿಕೆಗಳೆರಡೂ ಮಹತ್ವದಾಗಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತವೆ ಎಂದು ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಎಂ.ಕಾಂ. ವಿಭಾಗದ ವತಿಯಿಂದ ನೂತನ ವಿದ್ಯಾರ್ಥಿಗಳಿಗೆ ನವೋತ್ಸವ–2023’ ಎಂಬ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಹಿರಿಯಪ್ರಾಧ್ಯಾಪಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಮಾತನಾಡಿ, ಕಾಲೇಜಿನಲ್ಲಿರುವ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮೂಲಕ ಉನ್ನತ ಸ್ಥಾನಕೇರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ. ಎ. ಸಿದ್ಧಿಕ್,ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ವೃತ್ತಿ ಕೌಶಲ್ಯಗಳನ್ನು ಕೂಡಾಮೈಗೂಡಿಸಿಕೊಳ್ಳಬೇಕು. ಉತ್ತಮ ಸಂವಹನ, ಆತ್ಮವಿಶ್ವಾಸ, ನಾಯಕತ್ವ ಗುಣಗಳು, ಸಂಶೋಧನಾಆಸಕ್ತಿ ಎಲ್ಲವೂ ಉತ್ತಮ ಉದ್ಯೋಗಕ್ಕೆ ರಹದಾರಿ ಎಂದರು.