ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿ ( ಐಆರ್ ಸಿಎಸ್ ) ಯ ದ.ಕ.ಜಿಲ್ಲಾ ಘಟಕ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ರಕ್ತ ನಿಧಿಯನ್ನು ನಿರ್ವಹಿಸಿ , ಅತಿ ಹೆಚ್ಚು ಬಡ ರೋಗಿಗಳಿಗೆ ರಕ್ತ ಪೂರೈಸಿದ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದಿದೆ.
ಬೆಂಗಳೂರಿನ ರಾಜಭವನದಲ್ಲಿ ಮಂಗಳವಾರ ನಡೆದ ರೆಡ್ ಕ್ರಾಸ್ ರಾಜ್ಯ ಘಟಕದ ಮಹಾಸಭೆ ಯಲ್ಲಿ ರಾಜ್ಯಪಾಲ ಹಾಗೂ ಐಆರ್ ಸಿಎಸ್ ರಾಜ್ಯ ಘಟಕದ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋತ್ ಅವರಿಂದ ದ.ಕ.ಜಿಲ್ಲಾ ಘಟಕದ ಚೇರ್ಮನ್ ಚೇರ್ಮನ್ ಸಿಎ ಶಾಂತರಾಮ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.ರಾಜ್ಯ ಘಟಕದ ದ.ಕ.ಜಿಲ್ಲಾ ಪ್ರತಿನಿಧಿ ಯತೀಶ್ ಬೈಕಂಪಾಡಿ ,ದ.ಕ.ಜಿಲ್ಲಾ ಘಟಕದ ನಿರ್ದೇಶಕರಾದ ಡಾ.ಸಚ್ಚಿದಾನಂದ ರೈ, ಗುರುದತ್ ಎಂ ನಾಯಕ್ , ಪಿ.ಬಿ.ಹರೀಶ್ ರೈ , ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲ್ ಹೊಸೂರು, ಚೇರ್ಮನ್ ವಿಜಯ ಕುಮಾರ್ ಪಾಟೀಲ್ ಉಪಸ್ಥಿತರಿದ್ದರು.
ರೆಡ್ ಕ್ರಾಸ್ ದ ಕ ಶಾಖೆಯ ಬ್ಲಡ್ ಬ್ಯಾಂಕ್ ನಿಂದ ಸರಕಾರಿ ಲೇಡಿಗೊಷನ್ ಆಸ್ಪತ್ರೆಗೆ ಪ್ರತಿ ತಿಂಗಳು 450ಕ್ಕೂ ಅಧಿಕ ಯೂನಿಟ್ ರಕ್ತವನ್ನು ಉಚಿತವಾಗಿ ನೀಡುತ್ತಿದೆ. ಈಗ ಅತ್ಯುತ್ತಮ ರಕ್ತ ನಿಧಿ ಪ್ರಶಸ್ತಿ ಬಂದಿರುವುದು ಹೆಮ್ಮೆ ತಂದಿದೆ. ಸದಸ್ಯರ ಹಾಗೂ ಸಿಬ್ಬಂದಿ ಯ ಜವಾಬ್ದಾರಿಯೂ ಹೆಚ್ಚಾಗಿದೆ .ನಿರಂತರ ರಕ್ತ ದಾನ ಮಾಡುವ ಜಿಲ್ಲೆಯ ರಕ್ತದಾನಿಗಳಿಗೆ, ರಕ್ತದಾನ ಶಿಬಿರ ಆಯೋಜಿಸಿದ ಸಂಸ್ಥೆಗಳು ಮತ್ತು ಸ್ವಯಂ ಸೇವಕರಿಗೆ ಕೃತಜ್ಞತೆ
ಸಲ್ಲಿಸುವುದಾಗಿ ರೆಡ್ ಕ್ರಾಸ್ ಚೇರ್ಮನ್ ಸಿಎ ಶಾಂತರಾಮ್ ಶೆಟ್ಟಿ ಈ ಸಂದರ್ಭ ತಿಳಿಸಿದರು.ಮುಂದಿನ ಮೂರು ತಿಂಗಳಲ್ಲಿ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡ ಪೂರ್ಣ ಗೊಳ್ಳಲಿದೆ. ಬಳಿಕ ರಕ್ತ ನಿಧಿ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕೃತ ಗೊಳಿಸಲಾಗುವುದು.ಮುಂದಿನ ದಿನದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಬಿಪಿ ಎಲ್ ಕಾರ್ಡ್ ಹೊಂದಿರುವ ಎಲ್ಲ ಅಗತ್ಯ ರೋಗಿಗಳಿಗೆ ಉಚಿತವಾಗಿ ರೆಡ್ ಕ್ರಾಸ್ ರಕ್ತ ಪೂರೈಸಲಿದೆ ಎಂದು ಅವರು ತಿಳಿಸಿದ್ದಾರೆ.