22 C
Karnataka
Friday, November 15, 2024

ಪಕ್ಕಳಪಾದೆಯಲ್ಲಿ ದಿ| ನಾಗೇಶ್ ಪಡು ರಂಗಮಂಟಪ ಉದ್ಘಾಟನೆ

ಅರ್ಕುಳ : ಮೇರಮಜಲಿನ ಪಕ್ಕಳಪಾದೆ ಸರಸ್ವತಿ ನಗರದ ಶ್ರೀ ಸರಸ್ವತಿ ಭಜನಾ ಮಂದಿರದಲ್ಲಿ ಸಮಾಜ ಸೇವಕ, ಪತ್ರಕರ್ತ ದಿವಂಗತ ನಾಗೇಶ್ ಪಡು ಅವರ ಹೆಸರಿನಲ್ಲಿ ನೂತನ ರಂಗಮಂಟಪದ ಉದ್ಘಾಟನಾ ಸಮಾರಂಭ ನಡೆಯಿತು. ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನೆರವೇರಿದವು.
ಸಂಜೆ ನೂತನ ರಂಗ ಮಂಟಪದಲ್ಲಿ ಪತ್ರಕರ್ತರ ಸಭಾಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ವಹಿಸಿ ಪತ್ರಕರ್ತರ ಜವಾಬ್ದಾರಿ ಸಾಮಾಜಿಕ ಪರಿವರ್ತನೆಯಲ್ಲಿ ಬಹಳ ಮಹತ್ವದ್ದು. ಅಗಲಿ ಹೋದ ಪತ್ರಕರ್ತನನ್ನು ಊರಿನ ಜನತೆ ರಂಗಮಂಟಪವನ್ನು ಕಟ್ಟಿ ನೆನಪಿಸಿಕೊಳ್ಳುವುದು ಪತ್ರಿಕಾ ರಂಗದಲ್ಲೇ ವಿನೂತನ ಇತಿಹಾಸ. ಇದು ಪತ್ರಿಕಾರಂಗಕ್ಕೆ ಸಾಮಾಜಿಕ ಬದ್ಧತೆಯನ್ನು ಕಲಿಸಿಕೊಟ್ಟಿದೆ. ಪತ್ರಕರ್ತನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ಬಿನ ಅಧ್ಯಕ್ಷರಾದ ಹರೀಶ್ ರೈ, ಪ್ರೆಸ್ ಕ್ಲಬ್ ಕೋಶಾಧಿಕಾರಿ ಪ್ರಸಾದ್ ರೈ, ಪತ್ರಕರ್ತರಾದ ವಿಲ್ಫ್ರೆಡ್ ಡಿಸೋಜ, ವಿನಯ ಬೋಳಿಯಾರ್, ಹರೀಶ್ ಇರಾ ಉಪಸ್ಥಿತರಿದ್ದರು.
ಶ್ರೀಮತಿ ಜೀವಿತ ನಾಗೇಶ್ ಪಡು ಮತ್ತು ಕುಟುಂಬದವರು ನೂತನ ರಂಗಮಂದಿರವನ್ನು ಉದ್ಘಾಟಿಸಿದರು.ಆನಂತರ ನಡೆದ ರಂಗಮಂಟಪದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ತುಪ್ಪೆಕಲ್ಲು ಶ್ರೀ ಉಳ್ಳಾಕ್ಲು ಮೃಗಂತಾಯಿ ದೈವಸ್ಥಾನದ ಗಡಿಕಾರ ಸದಾನಂದ ಆಳ್ವ ಕಂಪ ಇವರು ಅಧ್ಯಕ್ಷತೆ ವಹಿಸಿ ಊರು ಸಾಧಕರನ್ನು ನೆನಪಿಡಬೇಕು. ಅವರ ಅಗಲುವಿಕೆಯ ಕಹಿ ನೆನಪನ್ನು ಅವರದ್ದೇ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸವಿಯನ್ನಾಗಿಸಬೇಕು. ನಾಗೇಶ್ ಪಡು ಅವರ ಆದರ್ಶಗಳು ಈ ರಂಗಮಂಟಪದ ಮೂಲಕ ಮುಂದಿನ ಎಳೆಯರ ಕಣ್ಣೆದುರು ನಿಲ್ಲುವಂತಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ಪಕ್ಕಳಪಾದೆ ಶ್ರೀಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮದ ಹರೀಶ್ ಪೆರ್ಗಡೆ, ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಕೋಶಾಧಿಕಾರಿ ಉಮೇಶ್ ಬೆಂಜನಪದವು, ಮಂದಿರದ ಗೌರವ ಅಧ್ಯಕ್ಷರಾದ ಶಿವಪ್ಪ ಸುವರ್ಣ, ಅಧ್ಯಕ್ಷರಾದ ವಸಂತ ಬಡ್ಡೂರು ಉಪಸ್ಥಿತರಿದ್ದರು. ಧಾರ್ಮಿಕ ರಂಗದ ಸೇವೆಗಾಗಿ ಶಿವಪ್ಪ ಸುವರ್ಣ ಮತ್ತು ಪೊಲೀಸ್ ಇಲಾಖೆಯಲ್ಲಿ ಸಿ ಆರ್ ಆಗಿ ಬಡ್ತಿ ಹೊಂದಿದ ಅರುಣ್ ಕುಮಾರ್ ಪಾದೆಮಾರ್ ಅವರನ್ನು ಸನ್ಮಾನಿಸಲಾಯಿತು. ಮಂದಿರದ ಸದಸ್ಯರಾದ ನಾಗಭೂಷಣ್ ಪ್ರಾರ್ಥನೆ ನಡೆಸಿದರು. ವಿಶುಕುಮಾರ್ ಸ್ವಾಗತಿಸಿದರು. ಶಿವಪ್ಪ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ್ ಪಕ್ಕಳಪಾದೆ ವಂದಿಸಿದರು. ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಪ್ರತಿಭೆಗಳು ಮತ್ತು ಶ್ರೀ ಸರಸ್ವತಿ ಬಾಲಗೋಕುಲದ ವಿದ್ಯಾರ್ಥಿಗಳಿಂದ ತುಳುನಾಡ ವೈಭವ ಮನೋರಂಜನಾ ಕಾರ್ಯಕ್ರಮ ನೆರವೇರಿತು. ಆನಂತರ ಶಾರದಾ ಆರ್ಟ್ಸ್ ಮಂಜೇಶ್ವರ ಇವರಿಂದ ಕಥೆ ಎಡ್ಡೆಂಡು ತುಳು ಹಾಸ್ಯಮಯ ನಾಟಕ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles