ಮಂಗಳೂರು: ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕುಸಲ್ದರಸೆ ನವೀನ್ ಡಿ ಪಡೀಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರವಾದ “ಜೀಟಿಗೆ” ನಂತರ ಸಂತೋಷ್ ಮಾಡ ಇವರು ನಿರ್ದೇಶಿಸಿದ ಮೊದಲ ಅರೆಭಾಷೆ ಚಿತ್ರವಾದ ಮೂಗಜ್ಜನ ಕೋಳಿ, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಾದ ಮೂಗಜ್ಜನ ಪಾತ್ರವನ್ನು ನವೀನ್ ಡಿ ಪಡೀಲ್ ಇವರು ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಒಂದೇ ಒಂದು ಮಾತಿಲ್ಲದ, ಕೋಳಿಗಳನ್ನು ಪ್ರೀತಿಸುವ ಒರಟು ಮುದುಕನ ಪಾತ್ರವನ್ನುಇವರು ಮನೋಜ್ಞವಾಗಿ ನಿಭಾಯಿಸಿದ್ದಾರೆ.
“ನಮ್ಮಕನಸು ಪ್ರೊಡಕ್ಷನ್ಸ್” ಎಂಬ ಬ್ಯಾನರಿನಡಿಯಲ್ಲಿ ಶ್ರೀ ಕೆ.ಸುರೇಶ್. ಇವರು ನಿರ್ಮಿಸಿರುವ ಚೊಚ್ಚಲ ಚಿತ್ರವೇ ಮೂಗಜ್ಜನ ಕೋಳಿ. ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಕಲನಕಾರ ಸುರೇಶ್ ಅರಸ್ ಇವರು ಚಿತ್ರದ ಸಂಕಲನ ಮಾಡಿದ್ದರೆ, ರಾಷ್ಟ್ರಪ್ರಶಸ್ತಿ ವಿಜೇತ ಕಾಂತಾರ2, ಸಲಾರ್ ನಂತಹ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಖ್ಯಾತ ಮೇಕಪ್ ಮ್ಯಾನ್ ರಂಜಿತ್ ಅಂಬಾಡಿ ಮೇಕಪ್ ಮಾಡಿದ್ದಾರೆ. ಖ್ಯಾತ ಸಾಹಿತಿಯಾದ ಸುಬ್ರಾಯ ಚೊಕ್ಕಾಡಿ ಸಾಹಿತ್ಯ ಬರೆದಿದ್ದಾರೆ. ಪಿ.ವಿಷ್ಣುಪ್ರಸಾದ್ ಛಾಯಾಗ್ರಾಹಕರಾಗಿದ್ದಾರೆ. ಕಥಾಕಲ್ಪನೆಯು ವಿನೀತ್ ವಟ್ಟಂಕುಳತ್ ಅವರದ್ದಾಗಿದ್ದರೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕಾದಂಬರಿಕಾರ ರಮೇಶ್ ಶೆಟ್ಟಿಗಾರ್ ಬರೆದಿದ್ದಾರೆ. ಈ ಚಿತ್ರಕ್ಕೆ ಸುಳ್ಯದ ಯುವ ಕವಯತ್ರಿ ರಮ್ಯಶ್ರೀ ನಡುಮನೆ ಇವರು ಅರೆಭಾಷೆಯ ಸಹಾಯ ನೀಡಿದ್ದಾರೆ. ಹಿನ್ನಲೆ ಸಂಗೀತ ದೀಪಾಂಕುರನ್, ಹಾಡುಗಳಿಗೆ ಅರುಣ್ ಗೋಪನ್, ಕಲಾ ನಿರ್ದೇಶನವನ್ನು ರಾಜೇಶ್ ಬಂದ್ಯೋಡ್, ವಸ್ತ್ರಾಲಂಕಾರವನ್ನು ಮೀರಾ ಸಂತೋಷ್, ಸಹನಿರ್ದೇಶಕರಾಗಿ ಅವಿನಾಶ್ ರೈ ಕಾಸರಗೋಡು, ಸಹಾಯಕ ನಿರ್ದೇಶಕರಾಗಿ, ರವಿ ವರ್ಕಡಿ, ಗಿರೀಶ್ ಸುಳ್ಯ, ಹಾಗೂ ಕಾರ್ಯ ನಿರ್ವಹಣೆಯನ್ನು ವಿಜಯ್ ಮಯ್ಯ ನಿರ್ವಹಿಸಿದ್ದಾರೆ.