ಮಂಗಳೂರು: ವಿಭಿನ್ನ ಪರಂಪರೆಯನ್ನು ಹೊಂದಿರುವ ಭರತ ಖಂಡವನ್ನು ಆಳಿದ ಅದೆಷ್ಟೋ ಪುಣ್ಯಾತ್ಮರು ಭವ್ಯ ಪರಂಪರೆಯನ್ನು ಈ ಮಣ್ಣಿಗೆ ಅರ್ಪಿಸಿದ್ದಾರೆ.ಅಯೋಧ್ಯೆಯನ್ನು ಆಳಿದ ಶ್ರೀರಾಮ ಕೇವಲ ರಾಜನಾಗಿರಲಿಲ್ಲ;ಧರ್ಮಪ್ರಜ್ಞೆಯ ದ್ಯೋತಕನಾಗಿದ್ದನು. ಭಾರತಕ್ಕೆ ಶ್ರೀರಾಮ ಹೆಸರೇ ಸಕಲರನ್ನು ಒಂದುಗೂಡಿಸುವಂತೆ,ಧರ್ಮದ ಜಾಗೃತಿಯನ್ನು ಎಚ್ಚರಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುವ ಅಪರಿಮಿತ ಆನಂದವನ್ನು ಉಂಟುಮಾಡುತ್ತದೆ ಎಂದು ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ಹೇಳಿದರು.
ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಶ್ರೀರಾಮ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಐತಿಹಾಸಿಕ ಶ್ರೀ ರಾಮ ಮಂದಿರದ ಲೋಕಾರ್ಪಣೆ ಮತ್ತು ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ದೇಶದಾದ್ಯಂತ ಹೊಸ ಸಂಚಲನವನ್ನು ಉಂಟುಮಾಡಿದೆ. ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯೂ ಕೂಡ ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿಕೊಂಡಿದ್ದು ಶ್ಲಾಘನೀಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ಡಿ ವಾಸುದೇವ ಕಾಮತ್, ಕಾರ್ಯದರ್ಶಿ ಎಂ.ರಂಗನಾಥ್ ಭಟ್,ಸದಸ್ಯರಾದ ಸುರೇಶ್ ಕಾಮತ್ , ಟಿ.ಗೋಪಾಲಕೃಷ್ಣ ಶೆಣೈ CA ಎಂ.ವಾಮನ್ ಕಾಮತ್, ಬಸ್ತಿ ಪುರುಷೋತ್ತಮ ಶೆಣೈ, ಶಿವಾನಂದ ಶೆಣೈ, ಯೋಗೀಶ್ ಕಾಮತ್, ನರೇಶ್ ಶೆಣೈ, ಅಶ್ವಿನಿ ಕಾಮತ್, ಮಹಾತ್ಮ ಗಾಂಧಿ ಮ್ಯೂಸಿಯಂನ ನಿರ್ದೇಶಕ ರಮೇಶ್ ಪೈ ಪಯ್ಯನೂರ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಒ ಉಜ್ವಲ್ ಮಲ್ಯ, ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ,ಸಂಸ್ಥೆಯ ಹಳೆಯ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..
ಕೆನರಾ ಪ್ರೌಢಶಾಲೆಯ ಶಿಕ್ಷಕ ಶ್ರೀ ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸಂಧ್ಯಾ ಸ್ವಾಗತಿಸಿ ಜಯರಾಮ್ ವಂದಿಸಿದರು.