ಮಂಜೇಶ್ವರ: ಧಾರ್ಮಿಕ ಶ್ರದ್ಧಾ ಕೇಂದ್ರವೆಂದೇ ಖ್ಯಾತಿ ಪಡೆದಿರುವ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಶುಕ್ರವಾರ ಬೆಳಗ್ಗೆ ದಕ್ಷಿಣ ಕನ್ನಡ ಬಿಜೆಪಿ ಯುವ ನೇತಾರರಾಗಿದ್ದ ದಿ. ಪ್ರವೀಣ್ ನೆಟ್ಟಾರ್ ರ ಪತ್ನಿ ನೂತನ ನೆಟ್ಟಾರುರವರು ಆಗಮಿಸಿ, ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲು “ಪ್ರವೀಣ್ ನೆಟ್ಟಾರ್” ರವರ ಹರಕೆಯ ತುಪ್ಪಕಾಯಿಯ ಸೇವೆಯನ್ನು ಸಲ್ಲಿಸಿದರು.
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಶಬರಿಮಲೆ ಯಾತ್ರೆಗೈಯ್ಯಲು “ಇರುಮುಡಿ ಕಟ್ಟುವ ಕಾರ್ಯಕ್ರಮ” ಶುಕ್ರವಾರ ನಡೆಯಿತು.. ಕ್ಷೇತ್ರದ ಗುರು ಸ್ವಾಮಿಗಳಾದ ಉದಯ ಪಾವಳರವರು ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ್ ಆಚಾರ್ಯರು ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ, ಪ್ರವೀಣ್ ನೆಟ್ಟಾರ್ ರವರ ಹರಕೆಯ ತುಪ್ಪವನ್ನು ನೂತನರವರ ಕೈಯಿಂದಲೇ ಹರಕೆಕಾಯಿಗೆ ತುಂಬಿಸಿದ್ದಾರೆ. ಸಂಜೆ ಶಬರಿಮಲೆ ಯಾತ್ರೆಗೈಯಲ್ಲಿರುವ ಕ್ಷೇತ್ರದ ಅಯ್ಯಪ್ಪ ಭಕ್ತವೃಂದ, 16 ರಂದು ಸನ್ನಿಧಿಗೆ ತಲುಪಿ, ಅಯ್ಯಪ್ಪ ವೃತಧಾರಿಗಳ ಹಾಗೂ ಭಕ್ತರ ಹರಕೆ ತುಪ್ಪವನ್ನು ಅಯ್ಯಪ್ಪ ಸ್ವಾಮಿಗೆ ಅಭಿಷೇಕ ನೆರವೇರಿಸಲಿರುವರು. ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾಗಿದ್ದ ಪ್ರವೀಣ್ ನೆಟ್ಟಾರ್ ಅವರು ತಮ್ಮ 17 ನೇ ವರ್ಷದಲ್ಲಿ ಹಾಗೂ 18 ನೇ ವರ್ಷದಲ್ಲಿ ಎರಡು ಬಾರಿ ಹೊಸಂಗಡಿಯಲ್ಲಿ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೈದಿದ್ದರು.
ಯಾವ ಬಿರಿಯಲ್ಲಿ ಮಾಲೆ ಧರಿಸಿ, ಯಾತ್ರೆಗೈದಿದ್ದಾರೆ ಎಂದು ನನಗೆ ತಿಳಿದಿಲ್ಲ, ಆದರೆ ಹೊಸಂಗಡಿಯಲ್ಲಿಯೇ ಮಾಲೆ ಧರಿಸಿ, ಶಬರಿಮಲೆಗೆ ತೆರಳಿದ್ದೆ ಎಂದು ಹೇಳಿದ್ದರು. ಆ ಬಳಿಕ ಪ್ರತೀ ವರ್ಷ ತಮ್ಮ ಊರಾದ ನೆಟ್ಟಾರ್ ನಿಂದ ಶಬರಿಮಲೆಗೆ ಯಾತ್ರೆಗೈಯುವ ಅಯ್ಯಪ್ಪ ಭಕ್ತ ವೃಂದದವರಲ್ಲಿ ಹರಕೆ ತುಪ್ಪ ಕಾಯಿ ತುಂಬಿಸಿ, ಕಳಿಸುತ್ತಿದ್ದರು. ಆದರೆ ಅವರ ಅಗಲುವಿಕೆಯ ಬಳಿಕ ನನಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೊರಕಿದ ಸರಕಾರಿ ಉದ್ಯೋಗದಿಂದಾಗಿ, ನಮ್ಮ ಕಚೇರಿಯಲ್ಲಿ ಸಹೋದ್ಯೋಗಿಯಾಗಿರುವ ಹೊಸಂಗಡಿ ಬಳಿಯ ಬೆಜ್ಜ ನಿವಾಸಿ ಜೀತ್ ಬೆಜ್ಜರವರು ಹಲವು ವರ್ಷಗಳಿಂದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಗೈಯುತ್ತಿದ್ದು, ಅವರ ಸಹಕಾರದಿಂದ ಹಾಗೂ ಕ್ಷೇತ್ರದ ಗುರುಸ್ವಾಮಿಗಳ ಸಲಹೆಯಂತೆ ಹಲವು ದಿನಗಳಿಂದ ವೃತವನ್ನು ಕೈಗೊಂಡು ಇಂದು ನನ್ನ ಪತಿ “ಪ್ರವೀಣ್ ನೆಟ್ಟಾರ್” ರ ಹರಕೆ ತುಪ್ಪಕಾಯಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲು ಸಾದ್ಯವಾಯಿತು ಎಂದು ನೂತನ ನೆಟ್ಟಾರು ತಿಳಿಸಿದ್ದಾರೆ.