ಮ೦ಗಳೂರು: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನ೦ಬಿಸಿ 10.5 ಲಕ್ಷಕ್ಕೂ ಅಧಿಕ ರೂ. ವ೦ಚನೆ ಮಾಡಿರುವ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ನಿವಾಸಿ ದೂರುದಾರರು 2023 ರ ನ.29 ರ೦ದು Facebook ನಲ್ಲಿ Share market ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ ಗೆ ಸೇರ್ಪಡೆಯಾಗಿದ್ದರು. ಈ ಗ್ರೂಪ್ ನಲ್ಲಿ ಸೂಚಿಸಿದಂತೆ, APP download ಮಾಡಿ ಅದರಲ್ಲಿ ದೂರುದಾರರ ಪತ್ನಿಯ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು, ಅದಕ್ಕೆ ದೂರುದಾರರ ಹಾಗೂ ಅವರ ಪತ್ನಿಯ ಆಧಾರ್ ಕಾರ್ಡ್, ಮೊಬೈಲ್ ನಂಬ್ರ, ಬ್ಯಾಂಕ್ ವಿವರವನ್ನು ನೀಡಿರುತ್ತಾರೆ. ಬಳಿಕ ಅಪರಿಚಿತ ವ್ಯಕ್ತಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 11,14,400 ರೂ. ಹಣವನ್ನು ಪಾವತಿಸಿದ್ದು, ಅದರಲ್ಲಿ 55,000ರೂ. ದೂರುದಾರರ ಖಾತೆಗೆ ಮರುಜಮೆಯಾಗಿರುತ್ತದೆ. ಬಾಕಿ ಹಣವನ್ನು ಹಿಂತಿರುಗಿಸದೆ ವಂಚಿಸಿರುತ್ತಾರೆ ಎಂಬುದಾಗಿ ದೂರುದಾರರು ದೂರಿನಲ್ಲಿ ವಿವರಿಸಿದ್ದಾರೆ. ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.