ಮಂಗಳೂರು : ಜ. 19, 20 ಮತ್ತು 21 ರಂದು ಮೂರು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳೂರು ಲಿಟ್ ಫೆಸ್ಟ್‌ನ ಆರನೇ ಆವೃತ್ತಿಯು ಜರುಗಲಿದೆ ಎ೦ದು ಭಾರತ್ ಫೌಂಡೇಶನ್ ನ ಟ್ರಸ್ಟಿ ಶ್ರಿರಾಜ್ ಗುಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಟ್ಟು 29 ಅವಧಿಗಳನ್ನು ಪ್ರಸ್ತುತ ಉತ್ಸವವು ಹೊಂದಿದೆ. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆ ಇವುಗಳಲ್ಲಿ 60 ಕ್ಕೂ ಅಧಿಕ ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ. ಈ ಬಾರಿಯ ʼThe Idea of Bharath’ ಪ್ರಶಸ್ತಿಗೆ ʼವನಿತಾ ಸೇವಾ ಸಮಾಜʼ, ಧಾರವಾಡ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.19 ರಂದು ಸಂಜೆ 5 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮೀಶ ತೋಳ್ಪಾಡಿ, ಹೆಸರಾಂತ ಕಲಾವಿದೆ ರಾಧೆ ಜಗ್ಗಿ, ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆ (ಐಸಿಎಸ್ಎಸ್ಆರ್) ಸದಸ್ಯ ಕಾರ್ಯದರ್ಶಿ ಡಾ. ಧನಂಜಯ ಸಿಂಗ್, ರಕ್ಷಣಾ ಸಚಿವರ ಸಲಹೆಗಾರ ಲೆ. ಜ. ವಿನೋದ ಖಂಡಾರೆ, ನಿಟ್ಟೆ ವಿಶ್ವವಿದ್ಯಾಲಯದ ಡಾ. ವಿನಯ್ ಹೆಗ್ಡೆ, ಮಿಥಿಕ್ ಸೊಸೈಟಿಯ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎ೦ದವರು ವಿವರಿಸಿದರು.
ಹೆಸರಾಂತ ಭರತನಾಟ್ಯ ಕಲಾವಿದೆ ರಾಧೆ ಜಗ್ಗಿ (ಜ.19 ಸ೦ಜೆ ) ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾದ ಸಂದೀಪ್ ನಾರಾಯಣ್ (ಜ.20 ಸ೦ಜೆ) ಕಾರ್ಯಕ್ರಮ ನಡೆಯಲಿದೆ. ಸಿನಿಮಾ ಪ್ರದರ್ಶನ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಕಾರ್ಕಳದ ವಂದನಾ ರೈ ಅವರಿಂದ ಮಕ್ಕಳಿಗಾಗಿ ʼಚಿಣ್ಣರ ಅಂಗಳʼ ನಡೆಯಲಿದೆ. ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಕ್ಲೇ ಮಾಡಲಿಂಗ್, ದೇಶೀ ಆಟಗಳು ಸೇರಿದಂತೆ ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ – (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ ಎ೦ದು ಟ್ರಸ್ಟಿ ಸುನಿಲ್ ಕುಲಕರ್ಣಿ ತಿಳಿಸಿದರು.
ಸಾಹಿತ್ಯ ಲೋಕದ ಮೂರು ಸಾಧಕರು, ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರ ಕುರಿತು ವಿಶೇಷ ಅವಧಿಗಳು ಜರುಗಲಿವೆ. ವಾಗ್ಮಿಗಳು, ಸಾಹಿತಿಗಳು, ಸಂಶೋಧಕರು, ವಿಷಯ ಪರಿಣಿತರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರಲಿದ್ದಾರೆ ಎ೦ದರು.ಆಯೋಜಕರುಗಳಾದ, ದುರ್ಗಾ ಪ್ರಸಾದ್ ಕಟೀಲ್,ಸುಜಿತ್ ಪ್ರತಾಪ್, ,ಈಶ್ವರ್ ಶೆಟ್ಟಿ, ದಿಶಾಶೆಟ್ಟಿ,ಉಪಸ್ಥಿತರಿದ್ದರು.