ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ವಾರ್ಷಿಕ ಕ್ರೀಡಾಕೂಟವು ರವಿವಾರ ಬೆಳಗ್ಗೆ ಸುರತ್ಕಲ್ ಗೋವಿಂದ ದಾಸ ಕಾಲೇಜ್ ಮೈದಾನದಲ್ಲಿ ಜರುಗಿತು. ಕ್ರೀಡಾಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಬಂಟ ಸಮುದಾಯದ ವಿದ್ಯಾರ್ಥಿಗಳು ಇಂದು ಕ್ರೀಡೆ ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಿಗುವ ಪ್ರೋತ್ಸಾಹ ಕಡಿಮೆಯಿದೆ. ಸರಕಾರ ಮತ್ತು ಸಾಮಾಜಿಕ ಸಂಘಟನೆಗಳು ಎಷ್ಟು ಸಹಾಯ ಕೊಟ್ಟರೂ ಸಾಲದು. ಯಾಕೆಂದರೆ ಇಂದು ಖರ್ಚು ವೆಚ್ಚಗಳು ಜಾಸ್ತಿಯಾಗಿವೆ. ಆದ್ದರಿಂದ ಎಲ್ಲರೂ ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ. ಈ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯೋಣ” ಎಂದರು.
ಬಳಿಕ ಮಾತಾಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, “ಸುರತ್ಕಲ್ ಭಾಗದಲ್ಲಿ ಬಂಟ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಸುರತ್ಕಲ್ ಬಂಟರ ಸಂಘ ಶ್ಲಾಘನೀಯ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಭಾಗದ ಹತ್ತಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು. ಸುರತ್ಕಲ್ ಬಂಟರ ಸಂಘ ಇದೇ ರೀತಿ ಸಾಮಾಜಿಕ ಚಟುವಟಿಕೆಗಳಲ್ಲಿ ನಿತ್ಯ ನಿರಂತರವಾಗಿ ತೊಡಗಿಕೊಳ್ಳಲಿ” ಎಂದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಮಾತನಾಡಿ, “ಸುರತ್ಕಲ್ ಬಂಟರ ಸಂಘ ಸದಾ ಕಾರ್ಯ ಚಟುವಟಿಕೆಯಿಂದ ಕೂಡಿರುತ್ತದೆ. ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಳ್ಳುತ್ತಿರುವುದು ಖುಷಿಯ ವಿಚಾರ. ಇಂತಹ ಸಮಾಜಮುಖಿ ಕಾರ್ಯಗಳು ನಿತ್ಯ ನಿರಂತರವಾಗಿ ಮುಂದುವರಿಯಲಿ” ಎಂದು ಶುಭ ಹಾರೈಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತಾಡುತ್ತಾ, “ಸುರತ್ಕಲ್ ಬಂಟರ ಸಂಘದ ಕಾರ್ಯಕ್ರಮಗಳಿಗೆ ಬರುವಾಗ ಖುಷಿಯಾಗುತ್ತದೆ. ಇಲ್ಲಿ ಪಕ್ಷ ಭೇದ ಮರೆತು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಇಲ್ಲಿಗೆ ಬರುವಾಗ ಪಕ್ಷ ಬದಿಗಿಟ್ಟು ಒಬ್ಬ ಬಂಟನಾಗಿ ಬರುತ್ತೇನೆ. ಸಮುದಾಯದ ಸಂಘಟನೆಗಳಲ್ಲಿ ರಾಜಕೀಯ ರಹಿತವಾಗಿ ನಾವೆಲ್ಲರೂ ದುಡಿದಲ್ಲಿ ಇಡೀ ಸಮುದಾಯ ಅಭಿವೃದ್ಧಿಯಾಗುತ್ತದೆ” ಎಂದರು.
ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವಿರಾಜ್ ಶೆಟ್ಟಿ ನಿಟ್ಟೆ ಗುತ್ತು, ಮನಪಾ ತೆರಿಗೆ ಹಣಕಾಸು ನಿರ್ವಹಣೆ ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಸ್ಥಾಪಕಾಧ್ಯಕ್ಷ ಕುಳಾಯಿಗುತ್ತು ರೋಹಿತಾಕ್ಷ ರೈ ಮಾಜೀ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್. ಪೂಂಜಾ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಶಿಶಿರ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಎ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಚೇಳಾಯರು, ಸುಜೀರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಅನೂಪ್ ಶೆಟ್ಟಿ ಪ್ರಾರ್ಥನೆಗೈದರು. ಲೀಲಾಧರ ಶೆಟ್ಟಿ ಸ್ವಾಗತಿಸಿದರು. ಪುಷ್ಪರಾಜ ಶೆಟ್ಟಿ ಕುಡುಂಬೂರು ವಂದಿಸಿದರು.
ರಾಜೇಶ್ವರಿ ಡಿ ಶೆಟ್ಟಿ ಮತ್ತು ಸುಧಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯಲ್ಲಿ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಸ್ಪರ್ಧೆಯ ಜೊತೆಗೆ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.