26 C
Karnataka
Saturday, April 19, 2025

ಫೆ.10ರಂದು ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ

ಸುಳ್ಯ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯಾಡಳಿತಗಳ ಸಹಕಾರದಲ್ಲಿ ಫೆ.10ರಂದು ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆಯುವ 5ನೇ ಹಾಗೂ ಸುಳ್ಯ ತಾಲೂಕಿನಲ್ಲಿ ನಡೆಯುವ ಎರಡನೇ ಗ್ರಾಮ ವಾಸ್ತವ್ಯ ಫೆ.10ರಂದು ದಿನಪೂರ್ತಿ ನಡೆಯಲಿದೆ. ಈ ಕುರಿತು ಪೂರ್ವಭಾವಿ ಸಭೆ ಜ.21ರಂದು ಕೊಲ್ಲಮೊಗ್ರದ ಮಯೂರ ಕಲಾ ಮಂದಿರದಲ್ಲಿ‌ ನಡೆಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರ ಗ್ರಾಮವಾಸ್ತವ್ಯದ ಕಲ್ಪನೆ, ಸ್ವರೂಪದ ಬಗ್ಗೆ ವಿವರಿಸಿದರು. ಮಾಧ್ಯಮಗಳು ಜನರ ಹಾಗೂ ಗ್ರಾಮಗಳ ಸಮಸ್ಯೆಗಳ ಬಗ್ಗೆ ನಿರಂತರ ಬೆಳಕು ಚೆಲ್ಲುವುದರ ಜೊತೆಗೆ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗಾಗಿ ಸಾರ್ವಜನಿಕರ ಮತ್ತು ಸರಕಾರದ ಮಧ್ಯೆ ಸೇತುವಾಗಿ ಕಾರ್ಯನಿರ್ವಹಿಸಲು‌ ಪತ್ರಕರ್ತರ ಗ್ರಾಮ ವಾಸ್ತವ್ಯವನ್ನು ಮಾಡಲಾಗುತಿದೆ. ಗ್ರಾಮ ವಾಸ್ತವ್ಯದಲ್ಲಿ ಸಚಿವರು, ಶಾಸಕರುಗಳು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಂದು ಜನರು ಗ್ರಾಮದ ಎಲ್ಲಾ‌ ಸಮಸ್ಯೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಸರಕಾರದ ಮುಂದೆ ಇರಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ಅಲ್ಲದೆ ಗ್ರಾಮಸ್ಥರೊಂದಿಗೆ ಪತ್ರಕರ್ತರ ಸಂವಾದ, ಚಾವಡಿ ಚರ್ಚೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರೋಗ್ಯ ತಪಾಸಣಾ, ಆಧಾರ್ ತಿದ್ದುಪಡಿ ಶಿಬಿರಗಳು ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಗ್ರಾಮದ ಪ್ರಮುಖರು ಮಾತನಾಡಿಕೊಲ್ಲಮೊಗ್ರ, ಹರಿಹರ ಗ್ರಾಮದಲ್ಲಿ ಕಂದಾಯ, ಅರಣ್ಯ ಸಂಬಂಧಿತ ಹಲವು ಸಮಸ್ಯೆಗಳು ಇದೆ. ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟಗಳು ಸೇರಿ ಹಲವು ಜ್ವಲಂತ ಸಮಸ್ಯೆಗಳು ಜೀವಂತವಾಗಿದೆ. ಗ್ರಾಮದಲ್ಲಿ ಹತ್ತಾರು ಬೇಡಿಕೆಗಳು, ಸಮಸ್ಯೆಗಳು ಇದೆ. ಆದುದರಿಂದ ಅರಣ್ಯ, ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ‌‌‌ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್ ಮಾತನಾಡಿದರು. ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಅಂಙಣ, ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕೆ ಜಯಶ್ರೀ ಚಾಂತಾಳ, ಹರಿಹರ ಕೊಲ್ಲಮೊಗ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ‌ ಕಲ್ನಾರ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪತ್ರಕರ್ತ ಬಾಲಕೃಷ್ಣ ಭೀಮಗುಳಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles