ಉಪ್ಪಿನಂಗಡಿ : ಸಹಕಾರಿ ಸಂಘದಲ್ಲಿ ನಕಲಿ ಬಳೆಗಳನ್ನುಅಡಮಾನವಿರಿಸಿ ಸಾಲ ಪಡೆದು ವ೦ಚನೆ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಜ. 31ರಂದು ಮಧ್ಯಾಹ್ನ ಆರೋಪಿಗಳಾದ ಸೆಬಾಸ್ಟಿಯನ್ ಮತ್ತು ಡಾನಿಶ್ ಅವರು ಸದ್ರಿ ಸಹಕಾರಿ ಸಂಘಕ್ಕೆ ಬಂದು, ಮೇಲ್ನೋಟಕ್ಕೆ ನಕಲಿಯೆಂದು ಕಂಡುಬಾರದಂತಹ ಒಟ್ಟು 40 ಗ್ರಾಮ್ ತೂಕದ 5 ನಕಲಿ ಬಳೆಗಳನ್ನು ಅಡಮಾನವಿರಿಸಿರುತ್ತಾರೆ .ಸದ್ರಿ ಚಿನ್ನಾಭರಣಗಳ ನೈಜತೆಯನ್ನು ಸಂಘದ ಸರಾಫರಾದ ಶ್ರೀಧರ ಆಚಾರ್ಯರವರು ಪರಿಶೀಲಿಸಿರುತ್ತಾರೆ. ಆರೋಪಿಗಳು ಸದ್ರಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿರಿಸಿ ರೂ 1,70,000/- ವನ್ನು ಪಡೆದು ಸಂಸ್ಥೆಗೆ ಮೋಸ ಮಾಡಿರುತ್ತಾರೆ. ಸಂಘದ ಸರಾಫರು ಸದ್ರಿ ನಕಲಿ ಚಿನ್ನಾಭರಣಗಳನ್ನು ಪರಿಶೀಲಿಸಿ ನೈಜ ಚಿನ್ನ ಎಂದು ಸುಳ್ಳು ಹೇಳಿ ನಂಬಿಕೆ ದ್ರೋಹ ಎಸಗಿರುತ್ತಾರೆ ಎಂಬುದಾಗಿ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.