ಮಂಗಳೂರು: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಪೀಡಿತರು ಮರಣ ಹೊಂದುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿಸಮಾಜದಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಭಾರತೀಯ ವೈದ್ಯಕೀಯಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ರಂಜನ್ ಆರ್. ಕೆ. ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಭಾರತೀಯ ವೈದ್ಯಕೀಯ ಸಂಘ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್ ದಿನದಕುರಿತಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ. ಅಣ್ಣಯ್ಯ ಕುಲಾಲ್, ಇಡೀ ದೇಶದಲ್ಲಿ ಅತಿ ಹೆಚ್ಚು ಜನರುಕ್ಯಾನ್ಸರ್ ರೋಗದಿಂದಾಗಿ ಮರಣ ಹೊಂದುತ್ತಿದ್ದಾರೆ. ಇದು ಎರಡನೇ ಅತಿ ದೊಡ್ಡಮರಣಕಾರಕವಾಗಿದ್ದು, ಇದರ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸವನ್ನು ವ್ಯಾಪಕವಾಗಿ ಎಲ್ಲೆಡೆಮಾಡಲಾಗುತ್ತಿದೆ ಎಂದರು.
ಎ.ಜೆ. ಆಸ್ಪತ್ರೆಯ ವೈದ್ಯೆ ಡಾ. ಅಮೃತ ಭಂಡಾರಿ, ಮಾದಕ ದ್ರವ್ಯ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಂತಹ ಚಟಗಳಿಂದ ಯುವ ಜನಾಂಗ ಆದಷ್ಟು ದೂರವಿಟ್ಟರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಕ್ಯಾನ್ಸರ್ ರೋಗವನ್ನು
ಖಂಡಿತವಾಗಿಯೂ ಗುಣಪಡಿಸಲು ಸಾಧ್ಯವಿದೆ. ಈ ಕುರಿತು ಅನಗತ್ಯವಾಗಿ ಹೆದರುವ ಅಗತ್ಯವಿಲ್ಲ. ಬದಲಾಗಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕ್ಯಾನ್ಸರ್ ಎಂಬುದು ಹುಣ್ಣು, ಅದು ದೇಹದ ಒಳಗೆ ಸೇರಿಕೊಂಡು ಹೇಗೆಂದರೆ ಹಾಗೆ ಬೆಳಯುತ್ತದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಾವು ಖಚಿತ. ಆದರೆ ಅದನ್ನು ಆರಂಭಿಕ ಹಂತದಲ್ಲೇ ಗುರುತಿಸುವ ಕೆಲಸವಾಗಬೇಕಿದೆ.
ಆಗ ಮಾತ್ರ ರೋಗಿಗಳನ್ನು ಕ್ಯಾನ್ಸರ್ ರೋಗದಿಂದ ಗುಣಪಡಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯಿಂದ ಇದನ್ನು ಮಣಿಸಲು ಸಾಧ್ಯವಿದೆ ಎಂದು ಜಾಗೃತಿಮೂಡಿಸಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಮುಖ್ಯಸ್ಥ ಸಿ.ಎ. ಶಾಂತಾರಾಮ್ ಶೆಟ್ಟಿ, ಗರ್ಭಕಂಠದ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಐಆರ್‌ಸಿಎಸ್ ವತಿಯಿಂದ ಸಾರ್ವತ್ರಿಕ ಲಸಿಕಾಕರಣಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು ಎಂದು ಭರವಸೆ ನೀಡಿದರು.
ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ಕುರಿತು ಡಾ. ಜೆಸ್ಸಿ ಮರಿಯಾ ಡಿಸೋಜಾ, ಗರ್ಭಕೋಶ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಡಾ. ಸಂಗೀತಾ ಕೆ., ಶ್ವಾಸಕೋಶದ ಕ್ಯಾನ್ಸರ್ ಕುರಿತು ಡಾ. ಅಲ್ಕಾ ಭಟ್ ಹಾಗೂ ಬಾಯಿ ಕ್ಯಾನ್ಸರ್ ಕುರಿತು ಡಾ. ಕವಿತಾ ಅವರು ವಿಶೇಷಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿಸಂಜಯ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ ಎನ್., ಐಆರ್‌ಸಿಎಸ್‌ನ ಉಪಾಧ್ಯಕ್ಷ ಡಾ. ಸತೀಶ್ ರಾವ್ ಸೇರಿದಂತೆ ನಾನಾ ಆಸ್ಪತ್ರೆಗಳವೈದ್ಯರು ಉಪಸ್ಥಿತರಿದ್ದರು.