ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಧನ ಇಲಾಖೆಗೆ ಸಂಬಂಧಪಟ್ಟ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಇಂಧನ ಸಚಿವಕೆ.ಜೆ. ಜಾರ್ಜ್ ಅವರಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಮನವಿ ಮಾಡಿದರು.
ಮಂಗಳೂರಿಗೆ ಭೇಟಿ ನೀಡಿದ ಸಚಿವರು, ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಉರ್ವಸ್ಟೋರ್ ನ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಬ್ರಹ್ಮರಥದ ರಥೋತ್ಸವವು ಭಾರೀ ವಿಜೃಂಭಣೆಯಿಂದ ನಡೆಯಲಿದ್ದು ಅಲ್ಲಿನ ಹೆಚ್.ಟಿ ಮತ್ತು ಎಲ್.ಟಿ ಓವರ್ ಹೆಡ್ ಲೈನನ್ನು ತೆಗೆದು ಯು.ಜಿ ಕೇಬಲ್ ಆಗಿ ಪರಿವರ್ತಿಸಬೇಕು. ಇದಕ್ಕೆ ಸುಮಾರು ಒಂದು ಕೋಟಿ ಅರವತ್ತು ಲಕ್ಷ ವೆಚ್ಚವಾಗಲಿದೆ. ಈ ಬಾರಿಯ ರಥೋತ್ಸವಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಮುಂದಿನ ವರ್ಷದಿಂದ ಈ ನಿಟ್ಟಿನಲ್ಲಿ ಶಾಶ್ವತ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪ್ರಸ್ತಾವನೆ ಹಾಗೂ ಡಿ.ಪಿ.ಆರ್ ಸಿದ್ಧಪಡಿಸಿ ಕಳುಹಿಸಿ ಕೊಡಲಾಗಿದೆ. ಅದನ್ನು ವಿಶೇಷ ಆದ್ಯತೆ ಮೇರೆಗೆ ಪರಿಗಣಿಸಿ ಅನುಮತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸಚಿವರು ಕೂಡಲೇ ಕೆ.ಪಿ.ಟಿ.ಸಿ.ಎಲ್ ವತಿಯಿಂದಲೇ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಧನ ಇಲಾಖೆಯ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ, ಮೆಸ್ಕಾಂನ ಎಂ.ಡಿ ಮತ್ತು ಇಂಧನ ಇಲಾಖೆಗೆ ಸಂಬಂಧಿಸಿದ ಹಲವು ಪ್ರಮುಖ ಅಧಿಕಾರಿಗಳು ಹಾಗೂ ಮಾಧ್ಯಮಗಳ ಮುಂದೆಯೇ ಒಪ್ಪಿಗೆ ನೀಡಿದರು
ಅದೇ ರೀತಿ ಮಂಗಳೂರು ದಸರಾ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರದಿಂದ ಮೆರವಣಿಗೆ ಸಾಗುವ ಮುಖ್ಯ ರಸ್ತೆಯಾದ ಕೂಳೂರು ಫೆರಿ ರಸ್ತೆ, ನ್ಯೂಚಿತ್ರ ಟಾಕೀಸ್, ಕಾರ್ ಸ್ಟ್ರೀಟ್, ಎಂಜಿ ರಸ್ತೆ, ನಾರಾಯಣ ಗುರು ವೃತ್ತ, ಪಿ.ವಿ.ಎಸ್ ಸರ್ಕಲ್, ಮುಂತಾದ ರಸ್ತೆಗಳಲ್ಲಿಯೂ ಹೆಚ್.ಟಿ ಮತ್ತು ಎಲ್.ಟಿ, ಓವರ್ ಹೆಡ್ ಲೈನನ್ನು ತೆಗೆದು ಯು.ಜಿ ಕೇಬಲ್ ಆಗಿ ಪರಿವರ್ತಿಸಬೇಕು. ಇದಕ್ಕೆ ಅಂದಾಜು 30 ಕೋಟಿ ವೆಚ್ಚವಾಗಬಹುದಾಗಿದ್ದು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು ದಸರಾದ ವೈಭವದ ಶೋಭಾಯಾತ್ರೆ ನಿರ್ವಿಘ್ನವಾಗಿ ನಡೆಯಲು ಸಹಕಾರ ನೀಡುವಂತೆ ಶಾಸಕರು ಮನವಿ ಮಾಡಿದರು. ಇದಕ್ಕೆ ಸಚಿವರು ಇದು ದೊಡ್ಡ ಮೊತ್ತದ ಕಾಮಗಾರಿಯಾಗಿರುವುದರಿಂದ ನೀವು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ತದನಂತರ ಅದಕ್ಕೆ ಅನುಮತಿ ಕೊಡಿಸುವ ಕೆಲಸವನ್ನು ನಾವು ಖಂಡಿತ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಲೈನ್ ಮ್ಯಾನ್ ಗಳು ಉತ್ತರ ಕರ್ನಾಟಕ ಸೇರಿದಂತೆ ಹೊರ ಜಿಲ್ಲೆಯವರಾಗಿದ್ದು ನೇಮಕಾತಿಗೊಂಡ ಮೂರ್ನಾಲ್ಕು ವರ್ಷಗಳಲ್ಲೇ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿರುವುದರಿಂದ ಮೆಸ್ಕಾಂ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಅಭಾವ ಉಂಟಾಗುತ್ತಿದೆ. ಸ್ಥಳೀಯರಿಗೇ ಈ ಉದ್ಯೋಗ ಸಿಗುವಂತಾದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಯುವಕರಿಗೆ ಟ್ರೈನಿಂಗ್ ನೀಡುವ ಕಾರ್ಯವೂ ಆರಂಭವಾಗಬೇಕಿದೆ. ಇಂಧನ ಇಲಾಖೆ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕರು ವಿಶೇಷವಾಗಿ ಮನವಿ ಮಾಡಲಾಗಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಚಿವರು ಎಲ್ಲಾ ಬೇಡಿಕೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಈಡೇರುವ ವಿಶ್ವಾಸ ವ್ಯಕ್ತವಾಗಿದೆ ಎಂದು ಶಾಸಕರು ತಿಳಿಸಿದರು.