16.7 C
Karnataka
Saturday, November 23, 2024

ಸಿ.ಆರ್.ಝಡ್. ಉಲ್ಲಂಘನೆ ವಿರುದ್ಧ ಕ್ರಮ: ಈಶ್ವರ ಖಂಡ್ರೆ

ಮಂಗಳೂರು: ಕರಾವಳಿ ನಿಯಂತ್ರಣ ವಲಯ ಉಲ್ಲಂಘನೆ ಕುರಿತಂತೆ ವರದಿ ಸಿದ್ಧಪಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಮಂಗಳವಾರ ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯ ಪರಾಮರ್ಶೆ ಸಭೆ ನಡೆಸಿ ಮಾಥನಾಡಿದರು. ಕರ್ನಾಟಕದ ಕರಾವಳಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಇವುಗಳಲ್ಲಿ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದ್ದಾರೆ.
ಮಂಗಳೂರು ವೃತ್ತದಲ್ಲಿ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಒಂದೇ ಸರ್ವೆ ನಂಬರ್ ನಲ್ಲಿ ಸಾವಿರಾರು ಎಕರೆ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಪ್ರದೇಶಗಳಲ್ಲಿ ತ್ವರಿತವಾಗಿ ಜಂಟಿ ಸರ್ವೆ ನಡೆಸಿ ಸಮಸ್ಯೆ ಪರಿಹರಿಸಲು ಸೂಚಿಸಿದರು.ಮಂಗಳೂರು ವೃತ್ತದಲ್ಲಿ ಕಡಲಕೊರೆತ ತಡೆಯಲು ಕಾಂಡ್ಲಾ ವನ (ಮ್ಯಾಂಗ್ರೋ)ಬೆಳೆಸುವಂತೆ ಮತ್ತು ಕಡಲ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದರು.
ಕಡಲಾಮೆ ಮೊಟ್ಟೆ ಪತ್ತೆಹಚ್ಚಿದ ಮೀನುಗಾರರಿಗೆ ಬಹುಮಾನ:
ತಣ್ಣೀರು ಬಾವಿಯ ಕಡಲ ತೀರದಲ್ಲಿ ಅಪರೂಪದ ಆಲಿವ್ ರೆಡ್ಲಿ ಕಡಲಾಮೆ ಮೊಟ್ಟೆ ಇಟ್ಟಿರುವುದನ್ನು ಪತ್ತೆ ಮಾಡಿ ಸಂರಕ್ಷಣೆಗೆ ನೆರವಾದ ಸಸಿ ತ್ಲು ಗ್ರಾಮದ ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೋಟ್ಯಾನ್ ಅವರಿಗೆ ಸಚಿವರು 5 ಸಾವಿರ ರೂಪಾಯಿಗಳ ಬಹುಮಾನ ಮತ್ತು ಪ್ರಶಂಸಾ ಪತ್ರ ಪ್ರದಾನ ಮಾಡಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶ ತ್ಯಾಜ್ಯ ನೀರು
ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ಮತ್ತು ರಾಸಾಯನಿಕ ತ್ಯಾಜ್ಯ ಸಂಸ್ಕರಣೆ ಆಗದೆ ಫಲ್ಗುಣಿ ನದಿಯನ್ನು ಸೇರುತ್ತಿದೆ ಎಂಬ ಬಗ್ಗೆ ದೂರುಗಳಿದ್ದು, ಈ ಬಗ್ಗೆ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ನಿಯಮ ಪಾಲಿಸದ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮತ್ಸ್ಯ ಸಂಸ್ಕರಣಾ ಘಟಕಗಳಿಂದ ದುರ್ನಾತ ಬರುತ್ತಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂಬ ದೂರುಗಳ ಬಗ್ಗೆಯೂ ಪರಾಮರ್ಶೆ ನಡೆಸಿದ ಸಚಿವರು, ಈ ಘಟಕಗಳಿಗೆ ಭೇಟಿ ನೀಡಿ, ಎಲ್ಲ ಘಟಕಗಳೂ ಪ್ರಮಾಣಿತ ಮಾನದಂಡಗಳನ್ನು ಪಾಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.
ಅರಣ್ಯ ಒತ್ತುವರಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವರು ಶುಂಠಿ ಬೆಳೆಯುವ ಹೆಸರಲ್ಲಿ 3 ಎಕರೆ 5 ಎಕರೆ ಭೂಮಿ ಗುತ್ತಿಗೆ ಪಡೆದು ಅಥವಾ ಖರೀದಿಸಿ ಸುತ್ತಮುತ್ತಲಿನ ಅರಣ್ಯ ನಾಶ ಮಾಡುತ್ತಿದ್ದಾರೆ ಎಂಬ ದೂರಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಲ ಕಾಲಕ್ಕೆ ಸ್ಯಾಟಲೈಟ್ ಚಿತ್ರಗಳ ಮೂಲಕ ಪರಿಶೀಲನೆ ನಡೆಸಿ, ಅರಣ್ಯನಾಶವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಸೂಚಿಸಿದರು. ಅದೇ ರೀತಿ 1978ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು 3 ಎಕರೆಗಿಂತ ಕಡಿಮೆ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ಮತ್ತು ಸಣ್ಣ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಜನರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸದಂತೆ ಮತ್ತು ಹತ್ತಾರು ಎಕರೆ ಭೂಮಿಯನ್ನು ಸ್ವಾರ್ಥಕ್ಕಾಗಿ ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles