ಮ೦ಗಳೂರು: 2004 ರಿಂದ 2014ರ ವರೆಗೆ 10 ವರ್ಷ ಮನಮೋಹನ್ ಸಿಂಗ್ ಅವರ ಹಾಗೂ 2014 ರಿಂದ 2024ರ ವರೆಗೆ ನರೇಂದ್ರ ಮೋದಿಯವರ ಅವಧಿಯಲ್ಲಿ ಪ್ರತೀವರ್ಷ ಕರ್ನಾಟಕಕ್ಕೆ ಬಂದಿರುವ ಅನುದಾನಗಳೆಷ್ಟು? ಎಷ್ಟು ಪ್ರಮಾಣ ಏರಿಕೆಯಾಗಿದೆ? ಯಾವೆಲ್ಲಾ ಬದಲಾವಣೆಗಳಾಗಿವೆ? ಏನೆಲ್ಲ ಅಭಿವೃದ್ಧಿಯಾಗಿದೆ? ಇವೆಲ್ಲದರ ಅರಿವು ಜನಸಾಮಾನ್ಯರಲ್ಲಿ ಈಗಾಗಲೇ ಇದೆ. ಹಾಗಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ದೆಹಲಿ ನಾಟಕವನ್ನು ಕೇಳುವವರೇ ಇಲ್ಲವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು.
ಕಾಂಗ್ರೆಸ್ ನಾಯಕರ ದೆಹಲಿ ಪ್ರವಾಸಕ್ಕೆ, ಅಲ್ಲಿನ ವಾಸ್ತವ್ಯಕ್ಕೆ ಖರ್ಚಾಗಲಿರುವ ದೊಡ್ಡ ಮೊತ್ತ ಜನರ ತೆರಿಗೆಯದ್ದೋ ಅಥವಾ ಪಕ್ಷದ್ದೋ ಎಂಬುದನ್ನು ಬಹಿರಂಗಪಡಿಸಬೇಕು. ಆ ದೊಡ್ಡ ಮೊತ್ತವನ್ನು ಇಲ್ಲಿ ಸಂಕಷ್ಟದಲ್ಲಿರುವವರ ಕಣ್ಣೊರೆಸಲು ಬಳಸಿಕೊಳ್ಳಬಹುದಿತ್ತು. ರಾಜ್ಯದ ತೀವ್ರ ಬರಗಾಲಕ್ಕೆ ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಕೇಂದ್ರದ ಕಡೆ ಬೊಟ್ಟು ಮಾಡುವ ಬದಲಿಗೆ ಮೊದಲು ರಾಜ್ಯ ಸರ್ಕಾರ ಯಾವ ಪರಿಹಾರದ ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಲಿ. ನಂತರ ಕೇಂದ್ರ ಸರ್ಕಾರದ ಅನುದಾನ ಬಂದ ಅದನ್ನೂ ಸಹ ಬಳಸಿಕೊಳ್ಳಲಿ. ಈ ಹಿಂದೆ ಇಂತಹದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೇಂದ್ರದ ಅನುದಾನಕ್ಕೆ ಕಾಯದೇ ತಕ್ಷಣ ರಾಜ್ಯದ ಜನರ ನೆರವಿಗೆ ಧಾವಿಸಿತ್ತು ಎಂದರು.
ರಾಜ್ಯ ಸರ್ಕಾರದ ದಾಟಿಯಲ್ಲೇ ನಾವೂ ಸಹ ಪ್ರಶ್ನಿಸುವುದಾದರೆ ಸರ್ಕಾರಕ್ಕೆ ನಮ್ಮ ಮಂಗಳೂರಿನಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಯಾಗುತ್ತಿದ್ದರೂ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಏಕೆ ನೀಡುತ್ತಿಲ್ಲ? ಹಾಗಾದರೆ ನಮ್ಮ ಜಿಲ್ಲೆಯ ಜನರ ತೆರಿಗೆಯ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ? ಕಾಂಗ್ರೆಸ್ಸಿನ ಜಾಹೀರಾತುಗಳಿಗಾಗಿ ಜನರ ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣವನ್ನು ವ್ಯಯಿಸುವುದು ಎಷ್ಟು ಸರಿ? ಇತ್ತೀಚೆಗೆ ನಡೆದ ತೆಲಂಗಾಣದ ಚುನಾವಣೆಗೂ ನಮ್ಮ ರಾಜ್ಯದ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಕಳ್ಳ ಮಾರ್ಗದಲ್ಲಿ ಸಾಗಿಸಿದ್ದು ಜನರು ಇನ್ನೂ ಮರೆತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿ ಜನಸಾಮಾನ್ಯರ ಬದುಕು ತತ್ತರಿಸಿ ಹೋಗುತ್ತಿದೆ. ಹಾಗಿದ್ದೂ ” ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ” ಎಂದು ಪದೇಪದೇ ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ ನಾಯಕರು ಹೇಳಿಕೆ ಕೊಡುತ್ತಲೇ ಇದ್ದಾರೆ. ಹಾಗಾದರೆ ರೈತರಿಂದ ಇಷ್ಟೆಲ್ಲಾ ಪ್ರತಿಭಟನೆ ನಡೆಯುತ್ತಿದ್ದರೂ ಹೈನೋದ್ಯಮದ ಪ್ರೋತ್ಸಾಹ ಧನ ಯಾಕೆ ಕೊಡುತ್ತಿಲ್ಲ? ಅಭಿವೃದ್ಧಿ ಯೋಜನೆಗಳಿಗೆ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ? ಒಟ್ಟಾರೆಯಾಗಿ ಇಂಥಹವರ ಕೈಗೆ ಅಧಿಕಾರ ಸಿಕ್ಕು ಜನತೆಯ ಬದುಕು ಶೋಚನೀಯವಾಗಿರುವುದು ರಾಜ್ಯದ ಪಾಲಿನ ದುರಂತ ಎಂದರು.