ಮ೦ಗಳೂರು: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ.ವಿಮಲಾ ಪೈ ಪ್ರಾಯೋಜಿತ 2022ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯ 1 ಲಕ್ಷ ರೂ. ಮೊತ್ತ ಪಡೆದ ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊಬಿ.ಎ.ವಿವೇಕ ರೈ ಅವರು ತಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ವಿಟ್ಲ ಸಮೀಪದ ಪುಣಚಾ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದಾನವಾಗಿ ನೀಡಿದರು.
ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊಬಿ.ಎ.ವಿವೇಕ ರೈ ಅವರು, ‘ನಾವು ಕಲಿಯುವ ಸಂದರ್ಭ 8 ತರಗತಿಗೆ 9 ಅಧ್ಯಾಪಕರು ಇಲ್ಲಿ ಇದ್ದರು. ಆದರೆ ಈಗ 7 ತರಗತಿಗೆ ಒಬ್ಬರು ಅಧ್ಯಾಪಕರು ಇದ್ದಾರೆ. ಶಿಕ್ಷಣ ಇಲಾಖೆಯ ಧೋರಣೆ ಎಷ್ಟು ಅವೈಜ್ಞಾನಿಕ ಎಂಬುದು ಇದರಿಂದ ಗೊತ್ತಾಗುತ್ತದೆ. ಯಾವುದೋ ಯೋಜನೆಗಳಿಗೆ ಕೋಟಿ ಕೋಟಿ ರೂ. ಅನುದಾನ ನೀಡಲಾಗುತ್ತದೆ. ಆದರೆ, ಮಕ್ಕಳ ಭವಿಷ್ಯ ರೂಪಿಸುವ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ಯಾಕೆ ನೀಡುತ್ತಿಲ್ಲ ಎಂಬುದೇ ಪ್ರಶ್ನೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಅಧ್ಯಾಪಕರ ನೇಮಕ ಆಗಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಅಧ್ಯಾಪಕರು ಇಲ್ಲದಿರುವ ಕಾರಣಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ ಎನ್ನುವುದನ್ನು ಅವರು ತಿಳಿದುಕೊಂಡಿಲ್ಲ’ ಎಂದರು.
ಶಾಲೆಯ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮೊಹಮ್ಮದ್ ಮಾತನಾಡಿ, ತಾನು ಕಲಿತ ಶಾಲೆಯನ್ನು ಎಂದಿಗೂ ಮರೆಯದೆ ಆ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸುವುದು ಮಾದರಿ ಕಾರ್ಯ. ಸಾಹಿತ್ಯ ಕ್ಷೇತ್ರದಲ್ಲಿ ಪ್ರೊಬಿ.ಎ.ವಿವೇಕ ರೈ ಅವರು ಅದ್ವಿತೀಯ ಸಾಧನೆಯ ಮೂಲಕ ಈಗಾಗಲೇ ಸಾಹಿತ್ಯ ವಲಯದಲ್ಲಿ ಮೂಡಿಬಂದಿದ್ದಾರೆ. ಅವರು ಅದ್ವಿತೀಯ ಕೊಡುಗೆಯ ಮೂಲಕ ತಾನು ಕಲಿತ ಶಾಲೆಯ ಅಭಿವೃದ್ದಿಗೆ ಶ್ರಮಿಸಿರುವುದು ಮೇಲ್ಪಂಕ್ತಿಯ ಕಾರ್ಯ ಎಂದರು.
ವಿಜಯ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೆಜರ್ ಉಲ್ಲಾಸ್ ರೈ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ. ಮಾರಪ್ಪ ಶೆಟ್ಟಿ, ನಿವೃತ್ತ ಶಿಕ್ಷಕ ಮಣಿಲ ಸುಬ್ರಹ್ಮಣ್ಯ ಶಾಸಿಉಪಸ್ಥಿತರಿದ್ದರು. ಹರ್ಷಶಾಸಿ ಮಣಿಲ ಸ್ವಾಗತಿಸಿದರು. ಶಾಲಾ ಸಂಚಾಲಕಿ ಉಷಾಲಕ್ಷ್ಮೀ ವಂದಿಸಿದರು.