26.3 C
Karnataka
Saturday, November 23, 2024

ಮಂಗಳೂರಿಗೆ ಸರಕಾರಿ ವಿಶೇಷ ದತ್ತು ಕೇಂದ್ರ

ಮಂಗಳೂರು: ರಾಜ್ಯ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ವಿಶೇಷ ದತ್ತು ಕೇಂದ್ರವನ್ನು ಮಂಜೂರು ಮಾಡಿದ್ದು, ಮಂಗಳೂರು ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಬಾಲಕರ ಬಾಲಮಂದಿರದ ಕಟ್ಟಡದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇಲ್ಲಿಗೆ ಸಿಬ್ಬಂಧಿಗಳ ನೇಮಕಾತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳ ದತ್ತು ಪ್ರಕ್ರಿಯೆ ಈ ಕೇಂದ್ರದ ಮೂಲಕ ನಡೆಯಲಿದೆ ಎಂದು ಅವರು ತಿಳಿಸಿದರು.
ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಡಿಸೆಂಬರ್‍ನಲ್ಲಿ 40 ಮತ್ತು ಜನವರಿ ತಿಂಗಳಲ್ಲಿ 17 ದೂರುಗಳು ಬಂದಿವೆ. ದೂರು ಬಂದ ಕೂಡಲೇ ಖುದ್ದಾಗಿ ಭೇಟಿ ನೀಡಿ, ಮಾಹಿತಿ ಪಡೆದು ಅಗತ್ಯವಿದ್ದ ಪ್ರಕರಣಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರಕೃಷ್ಣಾ ಸಭೆಗೆ ಮಾಹಿತಿ ನೀಡಿದರು. ಮಂಗಳೂರಿನಲ್ಲಿ ಹೊಸದಾಗಿ ಬಾಲಕಿಯರ ಬಾಲಮಂದಿರ ಸ್ಥಾಪಿಸಲಾಗಿದ್ದು, 18 ಬಾಲಕಿಯರು ವಾಸ್ತವ್ಯದಲ್ಲಿದ್ದಾರೆ ಎಂದರು.
ಮಕ್ಕಳ ಪಾಲನಾ ಸಂಸ್ಥೆ ನೋಂದಣಿ ಕಡ್ಡಾಯ
ಮಕ್ಕಳಿಗೆ ವಾಸ್ತವ್ಯ ಮತ್ತು ಪಾಲನೆ ಮಾಡುವ ಯಾವುದೇ ಸಂಸ್ಥೆಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಶಿಕ್ಷಣಕ್ಕಾಗಿ ಮಕ್ಕಳನ್ನು ಸೇರಿಸುವ ಮಕ್ಕಳ ಪಾಲನಾ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರುತ್ತವೆ. ದ.ಕ. ಜಿಲ್ಲೆಯಲ್ಲಿ 75 ಮಕ್ಕಳ ಪಾಲನಾ ಸಂಸ್ಥೆಗಳು ಇದ್ದು, ಇದರಲ್ಲಿ 2362 ಮಕ್ಕಳು ಇದ್ದಾರೆ ಎಂದು ಅವರು ತಿಳಿಸಿದರು.
ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಸಿಗುವಂತಾಗಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ನಗರದ ಜನಸಂದಣಿ ಪ್ರದೇಶಗಳಲ್ಲಿ ಮಕ್ಕಳನ್ನು ಬಳಸಿ ಭಿಕ್ಷಾಟನೆ ನಡೆಸುವ ಪ್ರಕರಣಗಳನ್ನು ಕಂಡುಬರುತ್ತಿದ್ದು, ಕಾರ್ಯಾಚರಣೆ ಮೂಲಕ ಇದನ್ನು ತಡೆಗಟ್ಟುವಂತೆ ಅವರು ಪೊಲೀಸ್ ಇಲಾಖೆಗೆ ಸೂಚಿಸಿದರು.
ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಗಳನ್ನು ಪ್ರತೀ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸುವಂತೆ ಅವರು ನಿರ್ದೇಶಿಸಿದರು. ಗ್ರಾಮ ಪಂಚಾಯತ್ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಗಳನ್ನು ಪ್ರತೀ ತಿಂಗಳ ಮೊದಲ ವಾರದಲ್ಲಿ ನಿಗದಿತವಾಗಿ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಶೋಭಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಡಾ. ಹಿಲ್ಡಾ ರಾಯಪ್ಪನ್ ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles