26.5 C
Karnataka
Saturday, November 23, 2024

ಸಾಂಸ್ಕೃತಿಕ ಪಟ್ಟಿಗೆ ಜಾದೂ ಕಲೆ ಸೇರ್ಪಡೆಯಾಗಲಿ: ಕುದ್ರೋಳಿ ಗಣೇಶ್ ಮನವಿ

ಮಂಗಳೂರು : ಮನರಂಜನೆ ಜತೆಗೆ ವಿಸ್ಮಯ ಮೂಡಿಸುವ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ಕೇಂದ್ರದ ನಾಟಕ ಅಕಾಡೆಮಿ ಪಟ್ಟಿಯಲ್ಲಿ ಜಾದೂವಿಗೆ ಸ್ಥಾನ ನೀಡಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ್ಟಿಯಲ್ಲಿಯೂ ಜಾದೂ ಸೇರ್ಪಡೆಯಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಎಂದು ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ವಿನಂತಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಸಂಗೀತ, ನೃತ್ಯ, ಯಕ್ಷಗಾನದಂತೆ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೀನಾಸಂ, ರಂಗಾಯಣ ಮಾದರಿಯ ತರಬೇತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ಜಾದೂವನ್ನು ಇತರ ಕಲೆಗಳಂತೆ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾಗಿ ಕಲಿಸಲು ಸಾಧ್ಯವಿಲ್ಲ. ಜಾದೂ ಕಲಿಯುವ ವಿದ್ಯಾರ್ಥಿಯಲ್ಲಿ ಮೆದುಳು ಮತ್ತು ಕೈಚಳಕದ ಜತೆಗೆ ಸಮರ್ಪಣಾ ಮನೋಭಾವ ಅಗತ್ಯ.ಜಾದೂ ಕಲೆ ಸಿದ್ಧಿಸಿಕೊಳ್ಳಬೇಕೆಂದರೆ ಕನಿಷ್ಠ ಆರೇಳು ವರ್ಷಗಳ ಅಭ್ಯಾಸದ ಅಗತ್ಯವಿದೆ. ಈ ನಿಟ್ಟಿನಲ್ಲಿ ತರಬೇತಿ ನೀಡುವ, ಕಾಲೇಜು ತೆರೆಯುವ ಆಶಯವೂ ಇದೆ .
ವೃತ್ತಿಪರತೆಗಿಂತಲೂ ಹವ್ಯಾಸಿ ಕಲೆಯಾಗಿ ಉಳಿದಿರುವ ಜಾದೂವನ್ನು ನವರಸ ಪೂರ್ಣ ಭಾವದೊಂದಿಗೆ, ರಂಗಭೂಮಿಯಕಲೆಯಾಗಿ ಬೆಳೆಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
1998ರಿಂದ ತುಳುನಾಡಿನ ದೈವರಾಧಾನೆಯನ್ನು ಬಿಂಬಿಸುವ ಜಾದೂವನ್ನು ಪ್ರಸ್ತುತ ಪಡಿಸಿದ ಪರಿಣಾಮ ನಮ್ಮ ವಿಸ್ಮಯ ತಂಡ ಇದು ವಿಶ್ವವಿಖ್ಯಾತಿಯಾಗಲು ಸಾಧ್ಯವಾಗಿದೆ. ನಮ್ಮ ಮಣ್ಣಿನ ಜನಪದ ಸ್ಪರ್ಶವನ್ನು ಜಾದೂವಿನ ತಂತ್ರಗಾರಿಕೆಯ ಜತೆ ಬೆಸೆದಾಗ ವೀಕ್ಷಕನ ಭಾವನೆಗಳನ್ನು ತಟ್ಟಲು ಸಾಧ್ಯವಾಗುತ್ತದೆ. ಜಾದೂ ಕೂಡಾ ಸಾಮಾಜಿಕ ಕಳಕಳಿಯೊಂದಿಗೆ ಬೆರೆತಾಗ ಹೃದಯವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಕುದ್ರೋಳಿ ಗಣೇಶ್ ಹೇಳಿದರು.
ನಮ್ಮ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ
ಪಿ. ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕ್ರಮ ಸಂಯೋಜಕ ಆತ್ಮಭೂಷಣ ಭಟ್ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

ಓದಿನ ಹವ್ಯಾಸ ಜಾದೂ ಕಲೆಗೆ ಪ್ರೇರಣೆ

8ನೆ ತರಗತಿಯಿಂದಲೇ ಪುಸ್ತಕ ಓದುವ ಹುಚ್ಚು ಸಣ್ಣ ಪುಟ್ಟ ಮ್ಯಾಜಿಕ್‌ಗಳ ಬಗ್ಗೆ ಆಸಕ್ತಿ ಬೆಳೆಸಿತು. ದ್ವಿತೀಯ ಪಿಯುಸಿಯಲ್ಲಿ ಇರುವಾರ ಓದಿದ ಮ್ಯಾಜಿಕ್ ಫೋರ್ ದಿ ಬಿಗಿನರ್ಸ್ ಎಂಬ ಪುಸ್ತಕ ಓದಿನ ಜಾದೂವಿನ ಆಸಕ್ತಿಯನ್ನು ಇಮ್ಮಡಿಸಿತು. ಬಳಿಕ ಹವ್ಯಾಸಿ ಜಾದೂಗಾರರಾಗಿದ್ದ ಪ್ರದೀಪ್ ಅವರು ನನ್ನ ಗುರುವಾದರು. ಅವರು ಜಾದೂ ತಂತ್ರಗಾರಿಕೆಯನ್ನು ನನಗೆ ಹೇಳಿಕೊಟ್ಟಿದ್ದಲ್ಲದೆ, ಹಲವು ಪರಿಕರಗಳನ್ನೂ ನೀಡಿದರು. ಪದವಿ ಬಳಿಕ ಮುಂಗಾರು ಪತ್ರಿಕೆಯಲ್ಲಿ ಸುಮಾರು 3 ವರ್ಷಗಳ ಕಾಲ ಉಪಸಂಪಾದಕನಾಗಿದ್ದ ಸಂದರ್ಭ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಜಾದೂವಿನ ನನ್ನ ಆಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು ಎಂದು ಕುದ್ರೋಳಿ ಗಣೇಶ್ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles