ಮಂಗಳೂರು: “ಅಳಪೆ ಕಣ್ಣೂರಿನಲ್ಲಿರುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಮುಂಡಿತ್ತಾಯ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಮಾ. 10ರಿಂದ 15ರವರೆಗೆ ವಿಜೃಂಭಣೆಯಿಂದ ಜರುಗಲಿದೆ” ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
“ದೈವಸ್ಥಾನಕ್ಕೆ 850 ವರ್ಷಗಳ ಇತಿಹಾಸವಿದ್ದು ಭಕ್ತರ ಸಹಕಾರದೊಂದಿಗೆ ಭಂಡಾರ ಮನೆ, ದೈವದ ಗುಡಿಯು ನಿರ್ಮಾಣಗೊಂಡಿದ್ದು ಮಾ.13ರಂದು ಶ್ರೀ ಮುಂಡಿತ್ತಾಯ, ಮಹಿಷಂದಾಯ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಅಣ್ಣಪ್ಪ ಪಂಜುರ್ಲಿ, ಜಾನುನಾಯಕ, ಪಿಲಿಚಂಡಿ, ಕಲ್ಲುರ್ಟಿ ಕಲ್ಕುಡ ದೈವಗಳ ನೇಮೋತ್ಸವವು ಅಘೋರ ತಾಂತ್ರಿಕ್ ದೇರೆಬೈಲ್ ಬ್ರಹ್ಮಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು” ಎಂದರು.
ಮಾ.10ರಂದು ಅಪರಾಹ್ನ 3 ಗಂಟೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಲಿದೆ. ದಿನಾಂಕ ಮಾ.11ರ ರಾತ್ರಿ 7 ಗಂಟೆಯಿಂದ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ, 12ರಂದು ರಾತ್ರಿ 8 ಗಂಟೆಯಿಂದ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಮಾ.15ರಂದು ಸಂಜೆ 6 ಗಂಟೆಯಿಂದ ಕಟೀಲು ಮೇಳದಿಂದ ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಮಾ.16ರಿಂದ ವಾರ್ಷಿಕ ದೊಂಪದ ಬಲಿ ಜಾತ್ರೆ, ಮಾ.20ರಿಂದ 28ರವರೆಗೆ ವಾರ್ಷಿಕ ನೇಮೋತ್ಸವ ಜರುಗಲಿದೆ. ಪ್ರತಿನಿತ್ಯ ಸಾರ್ವಜನಿಕ ಅನ್ನ ಸಂತರ್ಪಣೆ ಇದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವದ ಕೃಪೆಗೆ ಪಾತ್ರರಾಗಿ” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಬಡಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪೆರ್ಲ ರಾಮಕೃಷ್ಣ ನಾಯಕ್, ರಘುರಾಮ್ ಶೆಟ್ಟಿ, ಕಣ್ಣೂರು ಕಾರ್ಪೋರೇಟರ್ ಚಂದ್ರಾವತಿ ವಿಶ್ವನಾಥ್, ಅಳಕೆ ಕಾರ್ಪೋರೇಟರ್ ರೂಪಶ್ರೀ ಪೂಜಾರಿ, ವಾಸುದೇವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ನಿಖಿತ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.