16.7 C
Karnataka
Saturday, November 23, 2024

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಸಂವಾದ,ಶುಭಹಾರೈಕೆ

ಮಂಗಳೂರು: ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ರಾಜ್ಯದ್ಯಂತ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಶೇ. ನೂರರಷ್ಟು ಶ್ರಮವಹಿಸಿ ಓದುವ ಮೂಲಕ ಹೆಚ್ಚು ಅಂಕಗಳಿಸಿ ಚಾಂಪಿಯನ್ ಗಳಾಗುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕರೆ ನೀಡಿದರು.

ಅವರು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮಾರ್ಚ್ 6ರಂದು ತಮ್ಮ ಕಚೇರಿಯಿಂದ ವಿಡಿಯೋ ಸಂವಾದ ನಡೆಸಿ ಶುಭ ಹಾರೈಸಿದರು.

ಎಸ್ ಎಸ್ ಎಲ್ ಸಿಯಂತಹ ಮಹತ್ವದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಉತ್ತಮ ಮನಸ್ಥಿತಿಯನ್ನಿಟ್ಟುಕೊಳ್ಳಬೇಕು, ಇದೇ ಮೊದಲ ಬಾರಿಗೆ ನಿಮ್ಮ ಶಾಲೆ ದಾಟಿ ನಿಮ್ಮನ್ನು ನೀವೇ ಗುರುತಿಸಿಕೊಳ್ಳುವ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿದ್ದೀರಿ, ಆ ಗುರಿಯನ್ನು ಸಾಧಿಸಲು ಮಾನಸಿಕ ಸ್ಥಿತಿ ಉತ್ತಮವಿರಬೇಕು, ಶಿಸ್ತು, ಆತ್ಮವಿಶ್ವಾಸ ಅತ್ಯಂತ ಮುಖ್ಯ. ಯಾವುದೇ ಕಾರಣಕ್ಕೂ ಇವುಗಳಿಂದ ವಿಚಲಿತರಾಗಬಾರದು, ಮನಸಿಟ್ಟು ಓದಿದರೆ, ಶಿಸ್ತಿನ ಸಮಯ ಪಾಲನೆಯಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುವುದು, ಅದಕ್ಕಾಗಿ ಒಂದು ಕ್ಷಣ ಯೋಚಿಸಬೇಕು, ನಾನು ಯಾರು ಮತ್ತು ಏನನ್ನು ಎದುರಿಸಲು ಹೊರಟಿದ್ದೇನೆ ಎಂಬುದನ್ನು, ಅರಿತುಕೊಳ್ಳಬೇಕು, ಪರೀಕ್ಷೆ ಎದುರಿಸಲಿರುವ ಜಿಲ್ಲೆಯ ಎಲ್ಲಾ ಎಸ್ ಎಸ್ ಎಲ್ ಸಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಚಾಂಪಿಯನ್ ಗಳಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು.

ಉತ್ತಮ ಮನಸ್ಥಿತಿ ಹೊಂದಿದ ಗೆಲ್ಲುವವರು, ಮೈದಾನದಲ್ಲೂ ವಿಜೇತರಾಗುವರುತ್ತಾರೆ. ಆತ್ಮವಿಶ್ವಾಸದಿಂದ ನನ್ನಲ್ಲಿ ಆಗಬಹುದು, ನಾನು ಮಾಡಿತೋರಿಸಬಲ್ಲೆ ಎಂಬ ಛಲದಿಂದ ಪರೀಕ್ಷೆ ಬರೆದು ಹೊರ ಬರಬೇಕು ಎಂದರು.ನಿಮ್ಮಲ್ಲಿ ಉತ್ತಮ ಸಕಾರಾತ್ಮಕ ಅಂಶವಿರಬೇಕು ಯಾವುದೇ ರೀತಿಯ ಆತಂಕ, ವಿಷಾದಭಾವ ಮೂಡದಂತೆ ಎಚ್ಚರ ವಹಿಸಬೇಕು, ಎಸ್ ಎಸ್ ಎಲ್ ಸಿ ಪತ್ರಿಕೆಯ ಮೂಲಕ ನಿಮ್ಮ ತಾಕತ್ತು ಹೊರ ಜಗತ್ತಿಗೆ ತಿಳಿಯುವುದು, ಅದಕ್ಕಾಗಿ ಶೇಖಡ ನೂರರಷ್ಟು ಶ್ರಮ ಹಾಕಿದ್ದಲ್ಲಿ ಅದನ್ನು ಸಾಧಿಸಬಹುದು ಎಂದು ತಿಳಿದು ಓದಿರಿ ಎಂದವರು ಹೇಳಿದರು.

ಇನ್ನೇನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ 19 ದಿನಗಳು ಮಾತ್ರ ಉಳಿದಿದ್ದು, ಇದೀಗ ಓದಿನಲ್ಲಿ ನೀವು ಎಲ್ಲಿದ್ದೀರಿ, ಎಂಬುದನ್ನು ಚಿಂತಿಸಿ ಆ ಮೂಲಕ ಓದದೆ ಇರುವ ವಿಷಯಗಳ ಬಗ್ಗೆಯೂ ಗಮನ ಹರಿಸಿ, ಇದಕ್ಕೆ ವ್ಯವಸ್ಥಿತ ಓದು ಮುಖ್ಯ, ಪೂರ್ವ ತಯಾರಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯ ತುಂಬಾ ಕಷ್ಟವಾಗಿತೆಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕಷ್ಟದ ಸಂಗತಿಗಳು, ಫಾರ್ಮುಲಾಗಳು, ಟೆಕ್ನಿಕಲ್ ಮಾಹಿತಿಗಳನ್ನು ಒಂದು ಹಾಳೆಯಲ್ಲಿ ಬರೆದು ಅದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ನೆರವಿಗೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸಿದ್ದವಿದೆ ಎಂದರು.

ಓದುವ ವಿಷಯಗಳನ್ನು ಸಾಧ್ಯವಾದಷ್ಟು ವೈಯ್ಯಕ್ತಿಕ ನೆಲೆಯಲ್ಲಿ ಶಾರ್ಟ್ ನೋಟ್ಸ್ ಗಳನ್ನು ಸಿದ್ಧಪಡಿಸಿಕೊಳ್ಳಿ , 19 ದಿನ ಎಂದರೆ ಕಡಿಮೆ ಸಮಯಾವಕಾಶವಲ್ಲ, ರಾಜ್ಯಮಟ್ಟದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಗುರಿ ಹೊಂದಬೇಕು ಅದಕ್ಕಾಗಿ ವ್ಯವಸ್ಥಿತ ಪ್ರಯತ್ನ ಅಗತ್ಯ ಎಂದು ಹೇಳಿದರು.ಪರೀಕ್ಷೆಯಲ್ಲಿ ಸಮಯ ಪಾಲನೆ ಹೇಗೆ ಎಂಬ ವಿದ್ಯಾರ್ಥಿ ಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು 80 ಅಂಕಗಳ ಪರೀಕ್ಷೆಯಲ್ಲಿ ಮೊದಲ 10 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಕೂಲಂಕುಶವಾಗಿ ಓದಿ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಕೊನೆಯ 10 ನಿಮಿಷಗಳನ್ನು ಬರೆದಿರುವ ಉತ್ತರ ಗಳನ್ನು ಪರೀಕ್ಷಿಸಿ ಕೊಳ್ಳಲು ಮೀಸಲಿರಿಸಿಕೊಳ್ಳಬೇಕು, ಈ ಮಧ್ಯದಲ್ಲಿ ಸಿಗುವ ವೇಳೆಯನ್ನು ಎರಡು, ಐದು ಅಥವಾ ಇತರೆ ಅಂಕಗಳಿಗೆ ಎಷ್ಟು ಪ್ರಮಾಣದಲ್ಲಿ ಬರೆಯಲು ಕಾಲಾವಕಾಶ ನೀಡಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಳ್ಳಬೇಕು, ನೋಡಿದ ಕೂಡಲೇ ಬರೆಯುವುದಕ್ಕಿಂತ ಮುಂಚೆ 10 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಓದಿದ ನಂತರವೇ ಸಮಯ ಅವಕಾಶವನ್ನು ಹೊಂದಿಸಿಕೊಳ್ಳಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಅತ್ಯುತ್ತಮ ಸಾಮರ್ಥ್ಯವುಳ್ಳ ಜಿಲ್ಲೆ ಎಂದು ಮೊದಲಿನಿಂದಲೂ ಹೆಸರಾಗಿದೆ. ಅದನ್ನು ನೀವೆಲ್ಲರೂ ಚನ್ನಾಗಿ ಓದಿ, ಉತ್ತಮವಾಗಿ ಪರೀಕ್ಷೆ ಬರೆದು ಸಾಧಿಸಿ ತೋರಿಸಬೇಕು. ಪರೀಕ್ಷೆ ರಾಜ್ಯದ ಎಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿದ್ದು, ಇಲ್ಲಿ ಕಷ್ಟ ಎನ್ನುವುದು ಇರುವುದಿಲ್ಲ, ಯಾವುದೇ ರೀತಿಯ ಭಯ, ಭೀತಿ, ಹತಾಶೆಗೆ ಒಳಗಾಗದೇ ಪರೀಕ್ಷೆಯನ್ನು ಎದುರಿಸಿ, ಜಯ ನಿಮ್ಮದೇ, ಆಲ್ ದ ಬೆಸ್ಟ್ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಗಾರ್ , ಎಸ್ ಎಸ್ ಎಲ್ ಸಿ ಪರೀಕ್ಷೆಯ ನೋಡಲ್ ಅಧಿಕಾರಿ ವೆಂಕಟೇಶ್ ನಾಯಕ್, ಸೌಮ್ಯ ಉಪಸ್ಥಿತರಿದ್ದರು.ಜಿಲ್ಲೆಯ ಹಲವು ಶಾಲೆಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯವರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles