ಮ೦ಗಳೂರು: ರಾಜ್ಯದಲ್ಲಿ ಗೇರು ಕೃಷಿಯ ವಿಸ್ತರಣೆ ಮಾಡಿ ಉತ್ಪನ್ನವನ್ನು ಹೆಚ್ಚಿಸಲು ವಿವಿಧ ಕಾಯ೯ಕ್ರಮ ರೂಪಿಸಲು ನಿಧ೯ರಿಸಲಾಗಿದ್ದು ಮನೆಗೊ೦ದು ಗೇರುಗಿಡ ಅಭಿಯಾನ ನಡೆಸಲಾಗುವುದು ಎ೦ದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಹೇಳಿದ್ದಾರೆ.
ನಗರದ ಲಾಲ್ ಭಾಗನಲ್ಲಿ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 1000 ಹೇಕ್ಟರ್ ಗೇರು ಪುನಶ್ವೇತನ ಕೈಗೊಳ್ಳಲು 2ಕೋ.ರೂ. ಅನುದಾನ ಬಿಡುಗಡೆಗೊಂಡಿರುತ್ತದೆ. ಅನುದಾನದಲ್ಲಿ ಗೇರು ಪುನಶ್ವೇತನ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2023-24ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಗೇರು ಪುನಶ್ವೇತನ ಮತ್ತು ನರ್ಸರಿ ಕಾಮಗಾರಿಗಳಿಗೆ 1.89 ಕೋ.ರೂ.ಅನುದಾನ ಬಿಡುಗಡೆಗೊಂಡಿರುತ್ತದೆ. ಗೇರು ಪುನಶ್ವೇತನ ಮತ್ತು ನರ್ಸರಿ ಕಾಮಗಾರಿಗಳಿಗೆ ಇ-ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಅನುಷ್ಠಾನ ಹಂತದಲ್ಲಿರುತ್ತದೆ.ಗೇರು ಪುನಶ್ಚೇತನಕ್ಕೆ ೫೦ ಕೋರೂ. ಅನುದಾನ ನೀಡುವ೦ತೆ ಅರಣ್ಯ ಸಚಿವರಲ್ಲಿ ಈಗಾಗಲೇ ಮನವಿ ಮಾಡಿದ್ದೇನೆ ಎ೦ದರು.
ನಿಗಮದ ಮುಖ್ಯ ಆದಾಯ ಕೇವಲ ಕಚ್ಚಾ ಗೇರು ಬೀಜದ ಮಾರಾಟದಿಂದ ಬರುವುದಾಗಿರುತ್ತದೆ. ಗೇರು ಫಸಲಿನ ಮಾರಾಟವನ್ನು ಟೆಂಡರು ಮತ್ತು ಹರಾಜು ಮೂಲಕ ವಾರ್ಷಿಕವಾಗಿ ವಿಕ್ರಯಿಸಲಾಗುತ್ತಿದೆ. ಗೇರು ಫಸಲಿನ ಮಾರಾಟದಿಂದ 2022-23 ನೇ ಸಾಲಿನಲ್ಲಿ ನಿಗಮಕ್ಕೆ 4.1 4 ಕೋ.ರೂ.ಆದಾಯ ಬಂದಿರುತ್ತದೆ. ನಿಗಮ ಗೇರು ನೆಡುತೋಪುಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಅಧಿಕ ಇಳುವರಿ ನೀಡುವ ಕಸಿ ಗೇರು ನೆಡುತೋಪುಗಳನ್ನು ಅರಣ್ಯ ಪ್ರದೇಶಗಳಲ್ಲಿ ಬೆಳೆಸಿ ಹಾಗೂ ತನ್ನ ವಶದಲ್ಲಿರುವ ಹಳೆಯ ಗೇರು ನೆಡುತೋಪುಗಳ ನಿರ್ವಹಣೆಯನ್ನು ಮಾಡುತ್ತಾ ಅಲ್ಲದೆ ಕೃಷಿಕರಿಗೆ ಕೃಷಿ ಭೂಮಿಯಲ್ಲಿ ಅಧಿಕ ಇಳುವರಿ ನೀಡುವ ಕಸಿ ಗೇರು ಗಿಡಗಳನ್ನು ಬೆಳೆಸಲು ಕಸಿ ಗೇರು ಗಿಡಗಳನ್ನು ಪೂರೈಸುತ್ತಲಿದೆ ಎ೦ದವರು ವಿವರಿಸಿದರು.
ಆರಣ್ಯ ಇಲಾಖೆಯಿಂದ ಪಡೆದ ಗೇರು ನೆಡುತೋಪುಗಳ ಉಸ್ತುವಾರಿ ಹಾಗೂ ಕರ್ನಾಟಕದಲ್ಲಿ ಗೇರು ಕೃಷಿಯ ವಿಸ್ತರಣೆಯ ಮುಖ್ಯ ಉದ್ದೇಶದಿಂದ ನಿಗಮ ಪ್ರಾರಂಭಗೊಂಡಿದೆ. ನಿಗಮದ ಅಧಿಕೃತ ಬಂಡವಾಳ ರೂ.10 ಕೋಟಿ ಆಗಿದ್ದು ಸಂಚಿತ ಬಂಡವಾಳ ರೂ. 7.59 ಕೋ.ರೂ.ಆಗಿದೆ. 25629.66 ಹೆಕ್ಟೇರ್ ಗೇರು ನೆಡುತೋಪುಗಳನ್ನು ನಿಗಮ ಹೊ೦ದಿದೆ .ನಿಗಮವು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಅಧೀನದಲ್ಲಿದ್ದು ಕೇಂದ್ರ ಕಚೇರಿಯು ಮಂಗಳೂರಿನಲ್ಲಿರುತ್ತದೆ. ಈ ನಿಗಮಕ್ಕೆ ಎರಡು ವಿಭಾಗೀಯ ಕಚೇರಿಗಳಿದ್ದು ಮಂಗಳೂರು ಹಾಗೂ ಕುಮಟಾದಲ್ಲಿದೆ ಎ೦ದು ನಿಗಮದ ವ್ಯವಸ್ಥಾಪಕ ನಿದೇ೯ಶಕಿ ಕಮಲಾ ಅವರು ವಿವರಿಸಿದರು.
ಕಚೇರಿ ಉದ್ಘಾಟನೆ
ಕಚೇರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಿದರು.ಕಾ೦ಗ್ರೆಸ್ ಮುಖ೦ಡರು ಉಪಸ್ಥಿತರಿದ್ದರು.
