ಪುತ್ತೂರು: ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯರಾದ ಜಯಾನಂದ ಕೆ. ಬಂಗೇರ ರವರ ಮನೆಗೆ ಪುತ್ತೂರು ಶಾಸಕರ ಬೆಂಬಲಿಗರು ನುಗ್ಗಿ ದಾಂಧಲೆ ನಡೆಸಿದ ಪ್ರಕರಣದ ಕುರಿತು ವಿಚಾರಿಸಲು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಜಯಾನಂದ ಬಂಗೇರ ರವರ ಮನೆಗೆ ಭೇಟಿ ನೀಡಿದರು. ಜಯಾನಂದರು ಹಾಗೂ ಮನೆಯವರನ್ನು ಕುರಿತು ಮಾತನಾಡುತ್ತಾ ಬಿಜೆಪಿ ಪಕ್ಷವು ಸದಾ ನಿಮ್ಮ ಜೊತೆ ಇದೆ ಎಂದು ಹೇಳುತ್ತಾ ಧೈರ್ಯ ತುಂಬಿದರು.
ಘಟನೆಗೆ ಖಂಡನೆ ವ್ಯಕ್ತಪಡಿಸುತ್ತಾ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ,ಅವರು ಧೈರ್ಯವಾಗಿ ಪ್ರಶ್ನಿಸು ಅಂತ ಶಾಲೆಗಳಲ್ಲಿರುವ ಧ್ಯೇಯವಾಕ್ಯಗಳನ್ನು ಕಾಂಗ್ರೇಸ್ ಸರಕಾರವೇ ಬದಲಾಯಿಸಿತ್ತು. ಆದರೆ ಅದೇ ಪುತ್ತೂರಿನ ಶಾಸಕ ಆಗಿರುವ ಅಶೋಕ ರೈ ಅವರೇ ಹೇಳಿದ ಸುಳ್ಳನ್ನು ದ.ಕ. ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸದಸ್ಯ ಜಯಾನಂದ ಬಂಗೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಕ್ಕೆ ಉತ್ತರಕೊಡಲಾಗದ ಕಾಂಗ್ರೇಸ್ ಶಾಸಕ ತನ್ನ ಬೆಂಬಲಿಗರನ್ನು ಜಯಾನಂದ ಅವರ ಮನೆಗೆ ಚಂಡೆ ಬಳಗ ಹಾಗೂ ಬ್ಯಾನರ್ ಹಿಡಿದುಕೊಂಡು ಅಕ್ರಮವಾಗಿ ಗುಂಪಾಗಿ ಕಳುಹಿಸಿ ಅಲ್ಲಿ ವಾಸವಿರುವ ಜಯಾನಂದ ಅವರ ಹೆಂಡತಿ ಮಕ್ಕಳು ವಯೋವೃದ್ದರನ್ನು ಬೆದರಿಸುವ ಹಾಗೂ ವಸತಿ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಮುಖೇನ ಹೇಯ ದುರ್ವರ್ತನೆಯನ್ನು ತೋರಿದ್ದು ಕಾಂಗ್ರೇಸ್ ನ ನಡೆಯನ್ನು ದಕ್ಷಿಣ ಕನ್ನಡ ಬಿಜೆಪಿಯು ಅತ್ಯುಗ್ರವಾಗಿ ಖಂಡಿಸುತ್ತದೆ ಎ೦ದರು.
ಅಲ್ಲಿ ಚುನಾವಣಾ ನೀತಿ ಸಂಹಿತೆ ಚಾಲ್ತಿಯಲ್ಲಿ ಇರುವಾಗ ಚಂಡೆ ಹಾಗೂ ಬ್ಯಾನರ್ ಅನ್ನು ಚುನಾವಣಾ ಆಯೋಗದ ಅನುಮತಿ ಇಲ್ಲದೇ ಮೆರವಣಿಗೆ ಮೂಲಕ ಬಂದಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಆದ್ದರಿಂದ ಚುನಾವಣಾ ಆಯೋಗವು ಅಲ್ಲಿ ಬಂದಿದ್ದ ಚಂಡೆ,ವಾಹನ ಹಾಗೂ ಸಾಹಿತ್ಯಗಳನ್ನು ಮುಟ್ಟುಗೋಲು ಹಾಕಬೇಕು ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಹೇರಳೆ, ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವಾರ್, ನಿತೀನ್ ಕುಮಾರ್, ಆರ್. ಸಿ. ನಾರಾಯಣ, ವಿದ್ಯಾಗೌರಿ, ಸಹಜ್ ರೈ, ಯುವರಾಜ್ ಪೆರಿಯತ್ತೋಡಿ, ನಿತೇಶ್ ಕುಂಬ್ರ, ಅಶೋಕ್ ಹಾರಾಡಿ ಹಾಗೂ ಪಕ್ಷದ ಮುಖಂಡರು, ಪುತ್ತೂರು ಮಂಡಲದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.