ಮಂಗಳೂರು:ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ಸಂಬಂಧ ಜಿಲ್ಲೆಯ ಪಾಲನಾ (ಜಾರಿ) ಸಮನ್ವಯದ ನೋಡಲ್ ಅಧಿಕಾರಿಗಳಿಗೆ (ಎನ್ ಫೋಸ್೯ಮೆಂಟ್ ನೋಡಲ್ ಅಧಿಕಾರಿಗಳು) ಈಗಾಗಲೇ ತಮ್ಮ ಇಲಾಖೆಯಿಂದ ನೀಡಲಾಗಿರುವ ಪ್ರಾಮಾಣಿಕ ಕಾರ್ಯಚರಣ ವಿಧಾನ (ಎಸ್ ಒ ಪಿ) ದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯ ಎಲ್ಲಾ ಪಾಲನಾ ಸಮನ್ವಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ನಿರ್ದೇಶನ ನೀಡಿದರು.ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮಗಳನ್ನು ತಡೆಗಟ್ಟಲು ಜಾರಿ ನೋಡಲ್ ಅಧಿಕಾರಿಗಳು ಎಲೆಕ್ಷನ್ ಸಿಜರ್ ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶದ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಎಫ್ ಎಸ್ ಟಿ, ಎಸ್ ಎಸ್ ಟಿ ತಂಡಗಳು ನೀಡುವ ವಶಪಡಿಸಿಕೊಂಡ ವಸ್ತುಗಳ ವಿವರವನ್ನು ಈ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಸೂಚನೆ ಹಿಡಿದರು.
ಅಂತರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ಆರ್ ಟಿ ಓ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದರು.
ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ವಾಹನದ ಅವಶ್ಯಕತೆ, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳು ಹಾಗೂ ಮತದಾನದ ದಿನದಂದು ಅಗತ್ಯವಿರುವ ಊಟೋಪಚಾರದ ಅಂದಾಜು ವೆಚ್ಚದ ವಿವರ, ಎಫ್ ಎಸ್ ಟಿ, ವಿ ಎಸ್ ಟಿ ತಂಡಗಳಿಗೆ ವಿಡಿಯೋ ಮಾಡಲು ಅವಶ್ಯಕತೆ ಇರುವ ಕ್ಯಾಮರಾ ಗಳ ಬಗ್ಗೆ, ಏಕ ಗವಾಕ್ಷಿ ಪದ್ದತಿ ಬಗ್ಗೆ, ಕಂಟ್ರೋಲ್ ರೂಮ್ನಲ್ಲಿ ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಮರಿಯಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ಜೆಸಿಸಿಟಿ ಕುಮಾರ್ ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ಮಂಗಳೂರು ಆದಾಯ ತೆರಿಗೆ ಇಲಾಖೆಯ ಡಿಡಿಐಟಿ ಮಂಜುನಾಥ್, ಅಬಕಾರಿ ಇಲಾಖೆಯ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ಹಾಗೂ ಇತರರು ಸಭೆಯಲ್ಲಿದ್ದರು. ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.