ಮ೦ಗಳೂರು: “ಬೊಳ್ಳಿಮಲೆತ ಶಿವಶಕ್ತಿಲು” ತುಳು ಪೌರಾಣಿಕ ನಾಟಕದ 55ನೇ ಪ್ರದರ್ಶನ “ಸ್ವರ್ಣ ಸಂಭ್ರಮ” ಮಾ. 29 ಶುಕ್ರವಾರ ಸಂಜೆ 6ರಿಂದ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಜರಗಲಿದೆ.
ಸ್ವರ್ಣ ಸಂಭ್ರಮದೊಂದಿಗೆ ವಜ್ರ ಮಹೋತ್ಸವದ ಪಥದಲ್ಲಿ ದಾಪುಗಾಲಿಡುತ್ತಿರುವ ಶುಭಾವಸರದಲ್ಲಿ ಕರ್ನಾಟಕ ಸರಕಾರದ ಸಭಾಪತಿ ಯು.ಟಿ. ಖಾದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.ಕುದ್ರೋಳಿ ಶ್ರೀ ಭಗವತೀ ಯುವಜನ ಮಹಿಳಾ ಸೇವಾ ಸಮಿತಿಯ ಆಶ್ರಯದಲ್ಲಿ ಬೊಳ್ಳಿಮಲೆತ ಶಿವಶಕ್ತಿಲು ನಾಟಕ ಪ್ರದರ್ಶನ ಜರಗಲಿದೆ ಎ೦ದು ಕದ್ರಿ ನವನೀತ ಶೆಟ್ಟಿ ಅವರು ಸೋಮವಾರ ಪತ್ರಿಕಾಗೋಷ್ಢಿಯಲ್ಲಿ ತಿಳಿಸಿದರು.
ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ ಹಾಗೂ ಇತರ ಭಗವತೀ ಕ್ಷೇತಗಳ ಭಗವತೀ ಆರಾಧಕರಿಂದ ಮಾಹಿತಿಯನ್ನು ಪಡೆದು ನಾಟಕವನ್ನು ಪರಿಷ್ಕರಿಸಿ 2 ಗಂಟೆ 20 ನಿಮಿಷಗಳ ಅವಧಿಯಲ್ಲಿ ಜೀರುಂಭ ಭಗವತೀ, ಭದ್ರಕಾಳಿ, ಗುಳಿಗ, ದಂಡರಾಜ, ಮಲೆಯ ಚಾಮುಂಡಿ, ಗಂಟಾಕರ್ಣ ಮೊದಲಾದ ಶಿವಶಕ್ತಿಗಳ ಮಹಿಮೆಯ ಕಥೆಯನ್ನು ಈ ನಾಟಕ ಹೊಂದಿದ್ದು, ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕ೦ಡು ವೀಕ್ಷಕರ, ವಿಮರ್ಶಕರ ಮನಗೆದ್ದಿದೆ. ಜೂನ್ ತಿಂಗಳಲ್ಲಿ ತ್ರಿರಂಗ ಸಂಗಮದ ಸಂಚಾಲಕತ್ವದಲ್ಲಿ ಮುಂಬೈಯಲ್ಲಿ ಪ್ರದರ್ಶನಗಳನ್ನು ನೀಡಲಿದೆ ಎ೦ದರು.
ಶ್ರೀ ದೇವಿ ಭಗವತಿಯ ಪುರಾಣ ಪುಣ್ಯ ಚರಿತ್ರೆಯ ನಾಟಕವನ್ನು ಕದ್ರಿ ನವನೀತ ಶೆಟ್ಟಿಯವರು ರಚಿಸಿದ್ದು, ಸಾಯಿಶಕ್ತಿ ಕಲಾ ಬಳಗದ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ ನಿರ್ದೇಶಿಸಿ, ನೂತನ ನಾಟಕ ತಂಡವನ್ನು ಕಟ್ಟಿ ಯಶಸ್ವಿ 53ನೇ ಪ್ರದರ್ಶನವನ್ನು ಪೂರೈಸಿ, ಜನಮೆಚ್ಚುಗೆಯನ್ನು ಪಡೆದಿರುತ್ತಾರೆ. ವಿಶಿಷ್ಟ ಶೈಲಿಯ ರಂಗವಿನ್ಯಾಸ, ಧ್ವನಿ ಬೆಳಕು ಹಾಗೂ ವೇಷಭೂಷಣಗಳು, ಪ್ರತಿಭಾನ್ವಿತ ಕಲಾವಿದರ ಬಳಗ ಈ ತುಳು ಪೌರಾಣಿಕ ನಾಟಕದ ಯಶಸ್ಸಿಗೆ ಕಾರಣವಾಗಿದೆ.
ಸ್ವರ್ಣ ಸಂಭ್ರದ ಆಚರಣೆಯ ಅತಿಥಿಗಳಾಗಿ ವಿವಿಧ ಭಗವತೀ ಕ್ಷೇತ್ರಗಳ ಪ್ರಮುಖರಾದ ವಾಮನ ಇಡ್ಯಾ, ಗಣೇಶ್ ಕುಂಟಲ್ಪಾಡಿ, ಚಂದ್ರಹಾಸ್ ಉಳ್ಳಾಲ, ಕೃಷ್ಣ ಉಚ್ಚಿಲ, ವಿಶ್ವನಾಥ ಕುದ್ರು ಹಾಗೂ ರ೦ಗಭೂಮಿ ಮೇರು ಕಲಾವಿದರಾದ ಡಾ.ದೇವದಾಸ್ ಕಾಪಿಕಾಡ್ విಜಯ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಕಿಶೋರ್ ಡಿ ಶೆಟ್ಟಿಯವರು ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್ ಕುಮಾರ್ ದಾಸ್, ಸಾಯಿಶಕ್ತಿ ಕಲಾ ಬಳಗದ ಸಂಚಾಲಕರಾದ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್,ಗೌರವ್ ಶೆಟ್ಟಿಗಾರ್ ಮಠದಕಣಿ,ತೇಜಸ್ ಶೆಟ್ಟಿ ಮಡಕಣಗುತ್ತುಉಪಸ್ಥಿತರಿದ್ದರು.