ಮ೦ಗಳೂರು: ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಮಾ.29ರಿಂದ ಆರಂಭಗೊಳ್ಳಲಿದ್ದು, ಮಾ.31ರವರೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.
ನಡಾವಳಿ ಉತ್ಸವದ ಪ್ರಯುಕ್ತ ರವಿವಾರ ಗೊನೆ ಮುಹೂರ್ತ ನೆರವೇರಿದೆ. ಮಾ.28ರಂದು ಬೆಳಗ್ಗೆ 8ಕ್ಕೆ ಮಹಾಪೂಜೆ, ಶ್ರೀ ಕ್ಷೇತ್ರ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶುದ್ಧ ಕಲಶ, ಗಣಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ 6ಕ್ಕೆ ಕೆಳಗಿನ ಮನೆ ತರವಾಡಿನಿಂದ ಶ್ರೀ ತೊಂಡಚ್ಚಮಾರರ ಭಂಡಾರ ಶೋಭಾಯಾತ್ರೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ. ಮಾ.29ರಂದು ಬೆಳಗ್ಗೆ 9.45ಕ್ಕೆ ಭಂಡಾರ ಆರೋಹಣ, ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಆಗಮಿಸಲಿದೆ. 12.30ಕ್ಕೆ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ, ರಾತ್ರಿ 9.30ರಿಂದ ಬಲಿ ಉತ್ಸವ, ಮೂರ್ತಿ ದರ್ಶನ ನಡೆಯಲಿದೆ.
ಮಾ.30ರಂದು ಮಧ್ಯಾಹ್ನ 12.30ಕ್ಕೆ ಶ್ರೀ ಪಾಡಂಗರ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ, ರಾತ್ರಿ 9.30ರಿಂದ ಭೇಟಿಕಳ, ಮೇಲೇರಿಗೆ ಅಗ್ನಿಸ್ಪರ್ಶ, ವೀರಸ್ತಂಭ ದರ್ಶನ, ರಾತ್ರಿ 1.30ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ ಕರಂಗಲ್ಪಾಡಿಗೆ ತೆರಳಿ ಶ್ರೀ ಭಗವತೀ ಕಟ್ಟೆಯಲ್ಲಿ ಪೂಜೆ ನಡೆದು ಹಿಂದಿರುಗಲಿದೆ. ಮುಂಜಾನೆ 2.30ಕ್ಕೆ ಕೆಂಡಸೇವೆ, ಮೂರ್ತಿ ದರ್ಶನ ನಡೆಯಲಿದೆ.
ಮಾ.31ರಂದು ಮಧ್ಯಾಹ್ನ 12.30ಕ್ಕೆ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ, ರಾತ್ರಿ 9.30ಕ್ಕೆ ಶ್ರೀ ಪುಲ್ಲೂರಾಳಿ ಭಗವತೀ ಕ್ಷೇತ್ರದಲ್ಲಿ ಕೆಂಡ ಸೇವೆ, ಮೂರ್ತಿ ದರ್ಶನ ಆಗಿ ಭಂಡಾರ ಅವರೋಹಣ ಆಗಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇದೇ ವೇಳೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.