20.1 C
Karnataka
Friday, November 15, 2024

ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು:ದತ್ತಾತ್ರೇಯ

ಮಂಗಳೂರು: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಯ ಮಾತೇ ಇಲ್ಲವಾಗಿದೆ. ವಾಸ್ತವಿಕ ಅರ್ಥದಲ್ಲಿ ಕಾಂಗ್ರೆಸ್ ಮತ್ತು ಅಭಿವೃದ್ಧಿ ಎರಡೂ ವಿರೋಧ ಪದಗಳು ಎಂದು ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ಅವರು ಹೇಳಿದರು.

ದ.ಕ. ಜಿಲ್ಲಾ ಬಿಜೆಪಿ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸರಕಾರ ಬಂದ ಮೇಲೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಹಣವನ್ನೆಲ್ಲ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದ್ದಾರೆ. ಹೀಗಾಗಿ ಒಂದೇ ಒಂದು ಕಿ.ಮೀ ರಸ್ತೆಗೂಹೊಸದಾಗಿ ಡಾಮರೀಕರಣ ಆಗಿಲ್ಲ, ಇಡೀ ರಾಜ್ಯ ಬರಗಾಲ ಎದುರಿಸುತ್ತಿದೆ. ಆದರೆ ಬರ ಪರಿಹಾರದ ಯೋಜನೆಗಳು ಯಾವೂ ಈ ಸರಕಾರದಲ್ಲಿ ಇಲ್ಲ. ಕೇಂದ್ರ ಸರಕಾರಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಕೊಟ್ಟು ನೆರವು ಪಡೆಯುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಆದರೆ ಅದರ ಬದಲು ಕೇಂದ್ರದ ವಿರುದ್ಧ ಕೇಸು ಹಾಕುವ ವ್ಯರ್ಥ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ನೋ ವಿಷನ್, ನೋ ಮಿಷನ್, ಓನ್ಲೀ ಕರಪ್ಷನ್‌ ಅನ್ನುವ ಮಂತ್ರ ಮಾತ್ರ ಗೊತ್ತಿದೆ. ಇದೊಂದು ರೈತ ವಿರೋಧಿ ಸರಕಾರವಾಗಿದ್ದು, ಕೇಂದ್ರ ಸರಕಾರದ ರೈತ ಸಮ್ಮಾನ ಯೋಜನೆಗೂ ಅಡ್ಡಗಾಲು ಹಾಕಿದೆ. ಹಿಂದೆ ಬಿಜೆಪಿ ಸರರಕಾರವಿದ್ದಾಗ ಕೇಂದ್ರ ಸರಕಾರ ನೀಡುವ 6,000 ರೂ.ಗಳಿಗೆ 4,000 ರರೂ.ಗಳನ್ನು ಸೇರಿಸಿ ಒಟ್ಟು 10,000 ರೂ.ಗಳನ್ನು ರೈತರ ಖಾತೆಗಳಿಗೆ ನೇರ ಪಾವತಿ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ ಬಂದ ಕೂಡಲೇ ರಾಜ್ಯ ಸರಕಾರ ನೀಡುವ ಹಣಕ್ಕೆ ಕತ್ತರಿ ಹಾಕಲಾಯಿತು. ಅಲ್ಲದೆ ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ ಎಂದು ದತ್ತಾತ್ರೇಯ ಟೀಕಿಸಿದರು.
ರಾಜ್ಯದ ಜನತೆ ನೀರಿಗಾಗಿ ಹಾಹಾಕಾರ ಮಾಡುತ್ತಿದ್ದಾರೆ. ತುರ್ತಾಗಿ ಬೋರ್‍‌ವೆಲ್ ಕೊರೆಸುವುದಕ್ಕೂ ಆಗದ ಪರಿಸ್ಥಿತಿಯನ್ನು ಈ ಸರಕಾರ ತಂದಿಟ್ಟಿದೆ. ಬೋರ್‍‌ವೆಲ್ ಕಂಪನಿಗಳ ಮೇಲೆ ನಿಯಂತ್ರಣವಿಲ್ಲ, ರೈತರಿಗೆ ನೀಡಲಾಗುತ್ತಿದ್ದ ಉಚಿತ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಈಗ ಇಲ್ಲ. ರೈತರು ಅದಕ್ಕಾಗಿ ಕನಿಷ್ಠ 1 ಲಕ್ಷ ರೂ ಹೂಡಿಕೆ ಮಾಡಬೇಕಿದೆ. ಎಪಿಎಂಸಿ ಕಾಯ್ದೆಗೂ ತಿದ್ದಿಪಡಿ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಇಂತಹ ಸರಕಾರವನ್ನು ರೈತ ವಿರೋಧಿ ಎನ್ನದೆ ಬೇರೆ ಏನೆಂದು ಕರೆಯಬೇಕು? ಎಂದು ಅವರು ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಲಾಭದಾಯಕವಾಗಿ ನಡೆಯುತ್ತಿದ್ದ ಕೆಎಸ್ಸಾರ್ಟಿಸಿ ಸಂಸ್ಥೆಯನ್ನು ನಷ್ಟದ ಪ್ರಪಾತಕ್ಕೆ ತಳ್ಳಿದೆ. ಸಾಮಾನ್ಯವಾಗಿ 7 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ಹಿಂತೆಗೆದುಕೊಂಡು ಹೊಸ ಬಸ್‌ಗಳನ್ನು ಚಲಾವಣೆಗೆ ಬಿಡುವುದು ಸುರಕ್ಷತೆಯ ಮಾನದಂಡದ ಪ್ರಕಾರ ಕೈಗೊಳ್ಳುವ ಕ್ರಮ. ಆದರೆ ಈ ಕಾಂಗ್ರೆಸ್ ಸರಕಾರ ಬಂದ ಬಳಿಕ ಉಚಿತ ಪ್ರಯಾಣದ ಗ್ಯಾರಂಟಿ ನೆಪದಲ್ಲಿ ಹೊಸ ಬಸ್‌ಗಳನ್ನು ಖರೀದಿಸಲಾಗದ ಸ್ಥಿತಿಗೆ ತಳ್ಳಿದೆ. ಇದೀಗ 20 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನೂ ಸಂಚಾರಕ್ಕೆ ಬಿಡಲಾಗುತ್ತಿದೆ. ಇಂತಹ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಯಾವ ಗ್ಯಾರಂಟಿ ಇದೆ? ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಳೆದ 10 ವರ್ಷಗಳಲ್ಲಿ ದೇಶವನ್ನು ಸಮಗ್ರವಾಗಿ ರೂಪಾಂತರಗೊಳಿಸಿದೆ. ಅಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿ ಇಡೀ ಜಗತ್ತೇ ಭಾರತವನ್ನು ಬೆರಗಿನಿಂದ ನೋಡುವಂತೆ ಮಾಡಿದೆ. ಪ್ರಸ್ತುತ ಜಗತ್ತಿನಲ್ಲಿ ಭಾರತವು 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 2047ರ ವೇಳೆಗೆ ದೇಶವು ಸ್ವಾತಂತ್ರಯದ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ವಿಕಸಿತ ಭಾರತವಾಗಿ ಪರಿವರ್ತನೆ ಹೊಂದಲಿದೆ ಎಂದು ದತ್ತಾತ್ರೇಯ ಹೇಳಿದರು.
ಭಾರತೀಯ ಜನತಾ ಪಕ್ಷವು ಸಂಘಟನಾತ್ಮಕವಾಗಿ ಅತ್ಯಂತ ಬಲಿಷ್ಠವಾಗಿದ್ದು, ದೇಶದ ಎಲ್ಲ ಜನವರ್ಗಗಳನ್ನು ತಲುಪಿದೆ. ಸಾಂಪ್ರದಾಯಿಕವಾದ ವಿವಿಧ ಘಟಕಗಳಲ್ಲದೆ, ವಿವಿಧ ಮೋರ್ಚಾಗಳು, 25 ಪ್ರಕೋಷ್ಠಗಳನ್ನು ರೂಪಿಸಿ ಸಬ್‌ಕಾ ಸಾಥ್‌, ಸಬ್‌ ಕಾ ವಿಕಾಸ್‌ ಧ್ಯೇಯದ ಸಾಧನೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಡಳಿತ ಪ್ರಕೋಷ್ಠದ ಸಹ ಸಂಚಾಲಕ ಕಿರಣ್ ಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಸನ್ನ ದರ್ಭೆ, ಶಾಂತಾರಾಮ್ ಶೆಟ್ಟಿ, ವೈದ್ಯಕೀಯ ಪ್ರಕೋಷ್ಠದ ರವಿ ಗಣೇಶ್ ಮೊಗ್ರ, ಸಹಕಾರಿ ಪ್ರಕೋಷ್ಠದ ಪ್ರಮುಖರಾದ ರಾಜಾರಾಂ ಭಟ್‌ ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ, ಮಾಧ್ಯಮ ಸಹಸಂಚಾಲಕ ಕದ್ರಿ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles