17.9 C
Karnataka
Saturday, November 23, 2024

ಹುಚ್ಚು ಮನಸ್ಸಿನ ಸಾಹಸ ಯಶಸ್ಸಿಗೆ ಕಾರಣ :ಡಾ.ಎಂ.ಮೋಹನ ಆಳ್ವ

ಮಂಗಳೂರು : ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯ ಇರುವ ಶಿಕ್ಷಣವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು. ಮೌಲ್ಯಯುತ ಶಿಕ್ಷಣ ನಮ್ಮ ಗುರಿಯಾಗ ಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಪ್ರೆಸ್ ಕ್ಲಬ್‌ನ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದ್ದು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಕಳೆದ ದಿನಗಳು ಒಳ್ಳೆಯ ಸಮಯಗಳಾಗಿ ಸಂತಸ ಉಂಟು ಮಾಡಿದೆ. ಭವಿಷ್ಯದಲ್ಲಿ ಆಧುನಿಕ ಜಗತ್ತಿಗೆ ನಾನು ಎಷ್ಟರ ಮಟ್ಟಿಗೆ ಒಗ್ಗಿಕೊಳ್ಳುತ್ತೇನೆ ಎಂಬುದು ಬದುಕಿನ ಸವಾಲು ಎಂದರು.

  • ಹಾಸ್ಟೆಲ್ ಶಿಕ್ಷಣಕ್ಕೆ ಆದ್ಯತೆ
    ಬದುಕಿನಲ್ಲಿ ಕೆಲವೊಂದು ಕಾರ್ಯಗಳು ಹುಚ್ಚು ಮನಸ್ಸಿನ ಸಾಹಸ ಎಂದು ಅನಿಸಿದರೂ ಯಶಸ್ಸಿಗೆ ಅದೇ ಮುಖ್ಯ ಕಾರಣವಾಯಿತು. ಬಾಲ್ಯ,ವಿದ್ಯಾಭ್ಯಾಸ,ವೃತ್ತಿ ಜೀವನ ಹೀಗೆ 72 ವರ್ಷ ಕಳೆದರೂ ಹುಚ್ಚು ಮನಸ್ಸು ಕಡಿಮೆ ಆಗಲೇ ಇಲ್ಲ.ವಿದ್ಯಾರ್ಥಿ ಜೀವನದಲ್ಲಿ 20 ವರ್ಷ ಹಾಸ್ಟೆಲ್ನಲ್ಲಿದ್ದೆ. ಅಲ್ಲಿ ವಿದ್ಯೆ ಜತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೂ ಒತ್ತು ನೀಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನುಭವ. ಅದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟೆಲ್ ಸಹಿತ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ. ಆರ್ಥಿಕ ಸಂಕಷ್ಟದಲ್ಲಿರುವವರು, ಪ್ರತಿಭಾನ್ವಿತರು, ಕ್ರೀಡೆ, ಸಾಂಸ್ಕೃತಿಕ ಸಾಧಕ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉತ್ತಮ ವಿದ್ಯೆಗೆ ಅವಕಾಶ ನೀಡಲಾಗುತ್ತಿದೆ. ನಮ್ಮ ಸಂಸ್ಥೆ ಕ್ರೀಡೆಯಲ್ಲಿ ಹಾಗೂ ಸಾಂಸ್ಕೃತಿಕವಾಗಿ ಅತ್ಯುತ್ತಮ ಸಾಧನಾ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
    ಜಾಲತಾಣದಿಂದ ದೂರ
    ಹೆಚ್ಚು ಸಾಮಾಜಿಕ ಜಾಲತಾಣದ ಮೇಲೆ ಅವಲಂಬಿತವಾದಾಗ ನಮ್ಮಲ್ಲಿರುವ ಮುಗ್ಧತೆಯನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ, ನನಗೆ ಸಾಮಾಜಿಕ ಜಾಲತಾಣದ ಕುರಿತು ಆಸಕ್ತಿಯಿಲ್ಲ. ರಾಜಕೀಯ ಪಕ್ಷಗಳ ಮೇಲೆ ನನಗೆ ಗೌರವ ಇದೆ, ಆದರೆ ರಾಜಕೀಯ ಪಕ್ಷಗಳಿಂದ ನಾನು ದೂರ ಇದ್ದೇನೆ. ಬಾಲ್ಯದಿಂದ ಇಲ್ಲಿವರೆಗೂ ನಾನು ಇನ್ನೊಬ್ಬರ ಜತೆ ಸ್ಪರ್ಧೆ ಮಾಡಿದವನಲ್ಲ. ಯಾರಲ್ಲೂ ವೈರತ್ವ ಹೊಂದಿಲ್ಲ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಆಯಾಮಗಳಲ್ಲೂ ನಾಯಕತ್ವ ವಹಿಸಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮೋಹನ ಆಳ್ವ ಹೇಳಿದರು.
    ಸಾಹಿತ್ಯಾಸಕ್ತರಿಗೆ ನುಡಿಸಿರಿ :
    ನುಡಿಸಿರಿಗೆ ಇನ್ನು ಜಾತ್ರೆಯ ಸ್ವರೂಪ ಇರುವುದಿಲ್ಲ. ಆಸಕ್ತ ಸಾಹಿತ್ಯಾಸಕ್ತರನ್ನು ಮಾತ್ರ ಆಹ್ವಾನಿಸಿ ವಿಭಿನ್ನ ರೀತಿಯಲ್ಲಿ ಮೂರು ದಿನಗಳ ಕಾಲ ಸಂಘಟಿಸಲಾಗುವುದು. ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ವಿರಾಸ್ ಎಂದಿನಂತೆಯೇ ನಡೆಯಲಿದೆ ಎಂದು ಅವರು ಹೇಳಿದರು.
    ಹಿರಿಯ ಪತ್ರಕರ್ತ ವಿ.ಯು.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ
    ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles