ಮಂಗಳೂರು: ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದು, ಮಂಗಳೂರು ನಗರದ ಕಪಿತಾನಿಯೋ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ಪರಿಶೀಲಿಸಿದರು.ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು 432 ವಿದ್ಯಾರ್ಥಿಗಳು 19 ಕೊಠಡಿಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಲವು ಕೊಠಡಿಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಯವರು, ನಂತರ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು.ಮಕ್ಕಳಿಗೆ ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಕೇಂದ್ರದ ಮುಖ್ಯಸ್ಥರೊಂದಿಗೆ ಮಾಹಿತಿ ಪಡೆದುಕೊಂಡು, ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ಕ್ರಮವಹಿಸುವಂತೆ ಸೂಚಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೆಂಕಟೇಶ್ ಪಟಗಾರ್, ಎಸ್ ಎಸ್ ಎಲ್ ಸಿ ಪರೀಕ್ಷೆಯ ನೋಡಲ್ ಅಧಿಕಾರಿ ವೆಂಕಟೇಶ್ ನಾಯಕ್,ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಶಾಲೆಯ ಎಚ್.ಎಂ. ಸಿಸ್ಟರ್ ಲೀನಾ ಡಿಸೋಜಾ ಇದ್ದರು.