ಮ೦ಗಳೂರು: ಮ೦ಗಳೂರು ನಗರದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ ಸ೦ಭಾವ್ಯ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ತು೦ಬೆಯಲ್ಲಿ ನೀರಿನ ಪ್ರಮಾಣದ ಮೇಲೆ ನಿರ೦ತರ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತುಂಬೆಯಲ್ಲಿ ಬುಧವಾರ ನೀರಿನ ಪ್ರಮಾಣ 5.48 ಮೀಟರ್ ಇತ್ತು. 18.9 ಮೀಟರ್ ಸಾಮರ್ಥ್ಯದ ಎಎಂಆರ್ ಡ್ಯಾಂನಲ್ಲಿ 17.63 ಮೀಟರ್ ನೀರಿದೆ.ಕೆಳಭಾಗದ ಹರೇಕಳ ಅಣೆಕಟ್ಟಿನಲ್ಲಿ 1.95 ಮೀಟರ್ ಇದೆ. ಅದೇ ರೀತಿ , ಬಿಳಿಯೂರು ಡ್ಯಾಂನಲ್ಲಿ 4 ಮೀಟರ್ ನೀರಿದೆ. ತುಂಬೆಯಲ್ಲಿ ನೀರಿನ ಮಟ್ಟ 5 ಮೀಟರ್‌ಗೆ ಇಳಿದಾಗ ಎಎಂಆರ್ ಡ್ಯಾಂನಿ೦ದ ನೀರು ಹರಿಸಲಾಗುವುದು.ಎಎಂಆರ್ ಡ್ಯಾಂಗೆ ಬಿಳಿಯೂರು ಡ್ಯಾಂನಿ೦ದ ನೀರು ಹರಿಸಲಾಗುವುದು. ಒಟ್ಟು ಸದ್ಯದ ನೀರಿನ ಲಭ್ಯತೆ ನೋಡಿದರೆ ಮೇ ವರೆಗೆ ಪರಿಸ್ಥಿತಿಯನ್ನು ನಿಭಾಯಿಸುವ ವಿಶ್ವಾಸವಿದೆ ಎಂದರು..
ನಗರದ ಜನತೆ ನೀರು ಮಿತಬಳಕೆ ಮಾಡಬೇಕು. ಇತರ ಉದ್ದೇಶಗಳಿಗೆ ಕುಡಿಯುವ ನೀರು ಬಳಸಬಾರದು.ನೀರನ್ನು ಸಂರಕ್ಷಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎ೦ದವರು ಮನವಿ ಮಾಡಿದರು.
ನಗರ ಪ್ರದೇಶಗಳಾದ ಉಳ್ಳಾಲ, ಕೋಟೆಕಾರ್, ಸೋಮೇಶ್ವರದಲ್ಲಿ ನಿವಾಸಿಗಳು ನೀರಿನ ಕೊರತೆ ಎದುರಿಸುತ್ತಿದ್ದು, ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೊಣಾಜೆ, ಬಾಳೆಪುಣಿ, ನರಿಮೊಗರು, ಮಂಜನಾಡಿ, ಪಜೀರು ಸೇರಿದಂತೆ ಐದು ಗ್ರಾ.ಪಂ.ಗಳು ನೀರಿನ ಅಭಾವ ಎದುರಿಸುತ್ತದೆ ಎಂದರು.