ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಋಕ್ ಸಂಹಿತಾ ಯಾಗ ಐಕ್ಯಮತ್ಯ ಹೋಮ, ರುದ್ರ ಹೋಮ, ಧನ್ವಂತರಿ ಹೋಮ ಮತ್ತು ಸಹಸ್ರ ಚಂಡಿಕಾ ಯಾಗಗಳ ನಾನಾ ವೈಧಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು.
ಮಂಗಳವಾರ ಸಂಜೆ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆದು ಗೋಧೂಳಿ ಲಗ್ನದಲ್ಲಿ ಉಗ್ರಾಣ ಮುಹೂರ್ತ, ಚಂಡಿಕಾ ಯಾಗಶಾಲೆಯಲ್ಲಿ ವಾಸ್ತುರಕ್ಷೋಘ್ನ ಹೋಮ ನಡೆಯಿತು. ಬುಧವಾರ ಬೆಳಗ್ಗೆ 5ರಿಂದ ಸಾಮೂಹಿಕ ದೇವತಾ ಪಾರ್ಥನೆ, ಗುರುಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ದೇವನಾಂದಿ, ಆಚಾರ್ಯಾದಿ ಋತ್ವಿಕ್ ವರಣ, ಕಂಕಣ ಬಂಧನ, ಪ್ರಧಾನ ಕಲಶ ಸ್ಥಾಪನೆ, ಅರಣಿ ಮಥನ, ಅಗ್ನಿ ಪ್ರತಿಷ್ಠೆ, ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿ ಯಾಗದ ಕಲಶ ಸ್ಥಾಪನೆ ನಡೆಯಿತು. ಮಧ್ಯಾಹ್ನ 11 ಗಂಟೆಗೆ ಗಣಪತಿಯಾಗದ ಪೂರ್ಣಾಹುತಿ ನಡೆದು ಋಕ್ ಸಂಹಿತಾ ಯಾಗ ಪ್ರಾರಂಭವಾಯಿತು.ನೂರಾರು ಮಂದಿ ಪುರೋಹಿತರು ಯಾಗ ಕಾರ್ಯಕ್ರಮ ನಡೆಸಿಕೊಟ್ಟರು. ಸ್ವಯಂಸೇವಕರು ನಾನಾ ವ್ಯವಸ್ಥೆಗಳ ಜವಾಬ್ದಾರಿಗಳನ್ನು ನಿರ್ವಹಿಸಿದರು. ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ ಕೋಳಿಕ್ಕೆಜೆ, ಅಗಲ್ಪಾಡಿ ವೇದಮಾತಾ ಟ್ರಸ್ಟ್ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ಮೊಕ್ತೇಸರರು, ನಾನಾ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಶ್ರೀನಿಧಿ ಕೆ. ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಛೇರಿ, ಅನ್ವಿತಾ ತಲ್ಪನಾಜೆ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಛೇರಿ, ಪ್ರದುಮ್ನ ಶರ್ಮಾ ಉಪ್ಪಂಗಳ ಮತ್ತು ಧೃತಿ ಭಟ್ ಕೊರೆಕ್ಕಾನ ಅವರಿಂದ ಭಕ್ತಿಗಾನ ಮೇಳ ನಡೆಯಿತು.
ಮಾ.28ರ ಕಾರ್ಯಕ್ರಮ
ಮಾ.28ರಂದು ಬೆಳಗ್ಗೆ 6ಕ್ಕೆ ಕಲಶ ಸ್ಥಾಪನೆ, ಐಕ್ಯಮತ್ಯ ಹೋಮ, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.28ರಂದು ರಾತ್ರಿ 8 ಗಂಟೆಯಿಂದ ಚಿನ್ಮಯಿ ವಿ.ಭಟ್ ಬೇಂದ್ರೋಡು ಮತ್ತು ಸುಮನಾ ಕೆ.ದರ್ಭೆ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ. ರಾತ್ರಿ 8.45ರಿಂದ ಅಗಲ್ಪಾಡಿ ಪಾಂಚಜನ್ಯ ಬಾಲಗೋಕುಲ ಕುಣಿತಾ ಭಜನಾ ತಂಡದಿಂದ ಕುಣಿತ ಭಜನೆ, ರಾತ್ರಿ 9.15ರಿಂದ ವಾಣಿಶ್ರೀ ಬೆಂಗಳೂರು ಅವರಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿದೆ.