20.5 C
Karnataka
Friday, November 15, 2024

ರಾಜ್ಯದ ಆರ್ಥಿಕ ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಫಲ: ಪ್ರತಾಪ್ ಸಿಂಹ ನಾಯಕ್

ಮಂಗಳೂರು: ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಆಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ದಕ್ಷಿಣ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಅವರು ತಮ್ಮ ತಪ್ಪು ಮುಚ್ಚಿಕೊಳ್ಳಲು ದಿನಕ್ಕೊಂದು ನಾಟಕವಾಡುತ್ತಿದ್ದಾರೆ ಸಿದ್ದರಾಮಯ್ಯ. ಮೊದಲು ಕೇಂದ್ರ ಸರಕಾರ ಪಡಿತರ ಅಕ್ಕಿ ಕೊಡುತ್ತಿಲ್ಲ ಎಂದು ದೂರಿದರು; ನಂತರ ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ನಾಟಕವಾಡಿ ದೆಹಲಿಗೆ ತೆರಳಿ ಪ್ರತಿಭಟನೆ ಮಾಡಿದರು. ಇದೀಗ ಎನ್‌ಡಿಆರ್‍‌ಎಫ್‌ ಗಾಗಿ ಆರ್ಟಿಕಲ್ 32ರ ಅಡಿಯಲ್ಲಿ ಸುಪ್ರೀಂ ಕೋರ್ಟಿಗೆ ಹೋಗುವ ನಾಟಕ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈ ಯತ್ನ ನಡೆಸಿದ್ದಾರೆ. ಇದುವರೆಗೆ ಅವರು ನಿದ್ರೆ ಮಾಡುತ್ತಿದ್ದರೇ? ಎಂದು ಪ್ರತಾಪ್ ಸಿಂಹ ನಾಯಕ್ ಪ್ರಶ್ನಿಸಿದರು.
ಕಳೆದ ಬಜೆಟ್‌ನಲ್ಲಿ ಘೊಷಣೆ ಮಾಡಿದ ಗುರಿಯನ್ನು ಶೇ 40ರಷ್ಟು ಸಾಧಿಸುವುದಕ್ಕೂ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ. 15 ಬಜೆಟ್‌ಗಳನ್ನು ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ಆರ್ಥಿಕ ತಜ್ಞ ಸಿದ್ದರಾಮಯ್ಯನವರು ಹಣಕಾಸಿನ ನಿರ್ವಹಣೆಯಲ್ಲಿ ಸೋತಿರುವುದು ಎದ್ದು ಕಾಣುತ್ತದೆ. ಇದೇ ಮೊದಲ ಬಾರಿಗೆ ಕರ್ನಾಟಕವು ಜಿಡಿಪಿ ಬೆಳವಣಿಗೆಯಲ್ಲಿ ಭಾರತದ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ. ಯಾವಾಗಲೂ ದೇಶದ ಜಿಡಿಪಿಗಿಂತ ನಮ್ಮ ಜಿಡಿಪಿ ಹೆಚ್ಚಿರುತ್ತಿತ್ತು. 2021-22ರಲ್ಲಿ ದೇಶದ ಜಿಡಿಪಿ ಶೇ 9.1 ಇದ್ದಾಗ ಕರ್ನಾಟಕದ್ದು ಶೇ 9.8ರಷ್ಟಿತ್ತು. 2022-23ರಲ್ಲಿ ದೇಶದ ಜಿಡಿಪಿ ಶೇ 7.2 ಇದ್ದಾಗ ಕರ್ನಾಟಕದ್ದು ಶೇ 8.1 ಇತ್ತು. 2023-24ರಲ್ಲಿ ಭಾರತದ ಜಿಡಿಪಿ ಶೇ 7.3 ಇದ್ದು ಕರ್ನಾಟಕದ್ದು ಶೇ 6.6ಕ್ಕೆ ಕುಸಿದಿದೆ. ಇದಕ್ಕೆ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಲು ಸಾಧ್ಯವೇ ಎಂದು ಶಾಸಕರು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ರಾಜ್ಯದ ಮಧ್ಯಂತರ ಆರ್ಥಿಕ ಯೋಜನೆಯ ವರದಿಯಲ್ಲಿ ಸಮರ್ಪಕ ಅಂಕಿ-ಅಂಶ ನೀಡುತ್ತಾರೆ. ಆದರೆ ಬೀದಿಗೆ ಬಂದು ಮಾತನಾಡುವಾಗ ಕೇಂದ್ರದ ವಿರುದ್ಧ ಆರೋಪ ಮಾಡುತ್ತಾರೆ. ಈ ವರದಿಯ ಒಂದು ಕಡೆ 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಕೇಂದ್ರ ಸರಕಾರದ ಒಟ್ಟು ತೆರಿಗೆ ಸ್ವೀಕೃತಿಯು ಶೇ 12.6ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಇದನ್ನು ಇದೇ ಫೆಬ್ರವರಿಯಲ್ಲಿ ವಿಧಾನಸಭೆಯಲ್ಲೂ ಮಂಡಿಸಿದ್ದಾರೆ. 2022-23ರಲ್ಲಿ ಕೇಂದ್ರದಿಂದ ಪುರಸ್ಕೃತವಾದ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ 16,579 ಕೋಟಿ ಸಹಾಯಧನ ಸ್ವೀಕೃತವಾಗಿದೆ. ಅಲ್ಲದೆ 6,739 ಕೋಟಿ ರೂ.ಗಳನ್ನು ಇಲಾಖೆಗಳ ಎನ್‌ಎಸ್‌ಎ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಿದೆ.
2004ರಿಂದ 2014ರ ವರೆಗೆ ಆಗಿನ ಕಾಂಗ್ರೆಸ್ ಸರಕಾರ ತೆರಿಗೆ ಹಂಚಿಕೆಯಲ್ಲಿ 81,000 ಕೋಟಿ ರೂ.ಗಳನ್ನು ನೀಡಿದರೆ, ಅನಂತರದ 10 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರ 2.36 ಲಕ್ಷ ಕೋಟಿ ರೂ.ಗಳನ್ನು ನೀಡಿದ್ದು ಶೇ 243 ಅಧಿಕ ಹಂಚಿಕೆ ಮಾಡಲಾಗಿದೆ. ಹಾಗಿದ್ದರೂ ಸಿದ್ದರಾಮಯ್ಯ ಕೇಂದ್ರ ಸರಕಾರ ಹಣ ಕೊಟ್ಟಿಲ್ಲ ಎನ್ನುತ್ತಾರೆ. ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಚರ್ಚೆಗೆ ಸಿದ್ದ ಎನ್ನುತ್ತ ಉತ್ತರನ ಪೌರುಷ ಮೆರೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣೆ ನಿರ್ವಹಣಾ ಸಮಿತಿಯ ದೇವದಾಸ್ ಶೆಟ್ಟಿ ಹಾಗೂ ದ.ಕ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles