ಮಂಗಳೂರು: ಮೊಗವೀರ ಸಮುದಾಯದವರು ದೇಶದ ಸಾಗರ ಗಡಿಯ ನಿಜವಾದ ರಕ್ಷಕರು. ಭಾರತೀಯ ನೌಕಾಪಡೆ ರಚನೆಗೂ ಮೊದಲೇ ಜಲಪ್ರದೇಶದ ಗಡಿಯನ್ನು ರಕ್ಷಿಸುತ್ತ ಬಂದವರು ಮೀನುಗಾರ ಸಮುದಾಯದವರು. ಸಮುದಾಯದ ದೇಶಭಕ್ತಿ, ಹಿಂದುತ್ವದ ನಿಷ್ಠೆ ಅಪಾರವಾದುದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಪಕ್ಷದ ಮೀನುಗಾರರ ಪ್ರಕೋಷ್ಠದ ಸಮಾವೇಶದಲ್ಲಿ ಮಾತನಾಡಿದರು.ಮೀನುಗಾರರು ನಿಜವಾದ ಅರ್ಥದಲ್ಲಿ ಹಿಂದೂ ಸೈನಿಕರು. ಮೊಗವೀರ ಸಮಾಜದ ಬಂಧುಗಳು ಈ ಮಣ್ಣಿದ ದೈವ-ದೇವರುಗಳನ್ನು ನಂಬಿರುವವರು ಮತ್ತು ರಾಷ್ಟ್ರಾಭಿಮಾನ ಇಟ್ಟುಕೊಂಡವರು. ಎಂತಹ ಸವಾಲು ಬಂದರೂ ದಿಟ್ಟವಾಗಿ ಎದುರಿಸುವ ಸೈನಿಕನ ಮನಸ್ಥಿತಿ ಉಳ್ಳವರು. ರಾಷ್ಟ್ರದ ಹಿತಾಸಕ್ತಿ ಕಾಪಾಡುವಲ್ಲಿ ಕಾಯಾ ವಾಚಾ ಮನಸಾ ಹೋರಾಟ ನಡೆಸುವವರು ಮೀನುಗಾರ ಸಮಾಜದ ಬಂಧುಗಳು ಎಂದು ಕ್ಯಾಪ್ಟನ್ ಚೌಟ ನುಡಿದರು.
ಕರಾವಳಿಯಲ್ಲಿ ಬಿಜೆಪಿಗೆ ಶಕ್ತಿ ಕೊಟ್ಟ ಸಮುದಾಯವಿದು. ವಿಶ್ವವೇ ಮೆಚ್ಚಿ ಗೌರವಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಅಗತ್ಯವಿದೆ ಎಂದು ಕ್ಯಾ. ಚೌಟ ಮನವಿ ಮಾಡಿದರು.ಏಪ್ರಿಲ್ 4ರಂದು ತಾವು ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಇದೇ ಸಂದರ್ಭದಲ್ಲಿ ಕ್ಯಾ. ಚೌಟರು ತಿಳಿಸಿದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ತಮ್ಮ ಅವಧಿಯಲ್ಲಿ ಮೀನುಗಾರರ ಸೊಸೈಟಿ ಮೂಲಕ ಮೀನುಗಾರ ಸಮುದಾಯಕ್ಕೆ ನೀಡಲಾದ ನೆರವನನ್ನು ನೆನಪಿಸಿಕೊಂಡರು. ರಾಷ್ಟ್ರೀಯ ಮೀನುಗಾರ ವೇದಿಕೆಯ ಸಹ ಸಂಚಾಲಕ ರಾಮಚಂದ್ರ ಬೈಕಂಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, ಮಂಡಲ ಅಧ್ಯಕ್ಷ ಯಶವಂತ ಅಮೀನ್, ಪ್ರಮುಖರಾದ ಅನಿಲ್, ಶೋಭೇಂದ್ರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಮೇಶ್ ಅಮೀನ್ ಮುಕ್ಕ, ಹರೀಶ್ ಹೊಸಬೆಟ್ಟು, ಸತೀಶ್ ಸುವರ್ಣ ಪಣಂಬೂರು, ರೂಪೇಶ್ ಕರ್ಕೇರ ಬೆಂಗ್ರೆ, ಪ್ರದೀಪ್ ಮೆಂಡನ್ ಬೊಕ್ಕಪಟ್ಣ ಅವರನ್ನು ಮೀನುಗಾರ ಪ್ರಕೋಷ್ಠದ ಸಹ ಸಂಚಾಲಕರಾಗಿ ನೇಮಿಸಲಾಯಿತು.