ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಡಳಿತವನ್ನು ಗಮನಿಸಿ, ದೇಶದ ಅಭಿವೃದ್ಧಿಯಲ್ಲಿ ಆದ ಮಹತ್ವದ ಬದಲಾವಣೆಗಳನ್ನು ಪರಿಗಣಿಸಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಮತ್ತು ಅವರನ್ನು ಇನ್ನೊಂದು ಅವಧಿಗೆ ಪ್ರಧಾನಿಯಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಕೈಜೋಡಿಸಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಅವರು ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಬಿಜೆಪಿ-ಜೆಎಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ನಾವೆಲ್ಲರೂ ಒಂದೇ ರೀತಿ ಇದ್ದೇವೆ. ನಮ್ಮಲ್ಲಿ ವೈಚಾರಿಕ ಭಿನ್ನತೆಯಿದ್ದರೂ ನಮ್ಮ ಲಕ್ಷ್ಯ ಒಂದೇ ಆಗಿದೆ. ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಪರಮೋಚ್ಚ ಗುರಿ. ಇದಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಕೈಜೋಡಿಸಿ ಮುಂದುವರಿದಲ್ಲಿ ಉತ್ತಮ ಫಲಿತಾಂಶ ನಮ್ಮದಾಗಬಹುದು. ಈ ಮೈತ್ರಿಯಿಂದ ರಾಜಕೀಯವಾಗಿ ಬಹಳಷ್ಟು ಲಾಭವಾಗುವುದಲ್ಲದೆ, ಭ್ರಷ್ಟ ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಈ ಮೈತ್ರಿ ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಧವ ಗೌಡ ಮಾತನಾಡಿ, ಭ್ರಷ್ಟ ಹಾಗೂ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಅನ್ನು ಸೋಲಿಸಲು ಮತ್ತು ವಿಕಸಿತ ಭಾರತದ ಕನಸನ್ನು ನನಸು ಮಾಡಲು ನಾವು ಬಿಜೆಪಿ ಜತೆಗೆ ಕೈಜೋಡಿಸಿದ್ದೇವೆ. ನಮ್ಮ ಬೆಂಬಲ ವಿಲ್ಲದೆಯೂ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬಹುದು. ಆದರೆ ಆ ಅಂತರವನ್ನು ಇನ್ನೂ ಹೆಚ್ಚಿಸಲು ನಮ್ಮ ಶಕ್ತಿಯನ್ನು ಧಾರೆ ಎರೆಯುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಹಿರಿಯರಾದ ಎಂ.ಬಿ ಸದಾಶಿವ ಅವರು ಮಾತನಾಡಿ, ದೇವೇಗೌಡರು ಸೆಕ್ಯುಲರ್ ಅನ್ನುವ ಪದಕ್ಕೆ ಹೊಸ ಪರಿಭಾಷೆಯನ್ನು ಕೊಟ್ಟಿದ್ದಾರೆ. ಸೆಕ್ಯುಲರ್ ಎಂದರೆ ಎಲ್ಲರನ್ನೂ ಒಳಗೊಳ್ಳುವುದು (ಇನ್‌ಕ್ಲೂಸಿವ್) ಎಂಬ ವಿಸ್ತಾರವಾದ ಅರ್ಥವನ್ನು ಕಲ್ಪಿಸಿದ್ದಾರೆ. ದೇವೇಗೌಡರ ಆದರ್ಶಗಳನ್ನು ಪಾಲಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಸ್ವಾಗತಿಸಿದರು. ಕಾರ್ಪೊರೇಟರ್ ತಿಲಕ್ ರಾಜ್ ನಿರೂಪಿಸಿದರು. ನಿಕಟಪೂರ್ವ ಉಪ ಮೇಯರ್ ಪೂರ್ಣಿಮಾ ಅವರು ವಂದಿಸಿದರು.
ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಚುನಾವಣಾ ಸಂಚಾಲಕರಾದ ನಿತಿನ್ ಕುಮಾರ್, ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್,, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದ.ಕ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಾಧವ ಗೌಡ, ಹಿರಿಯ ಮುಖಂಡ ಎಂ.ಬಿ ಸದಾಶಿವ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ರಕ್ಷಿತ್ ಸುವರ್ಣ ಅವರು ಇಂದಿನ ಸಮನ್ವಯ ಸಭೆಯಲ್ಲಿ ಭಾಗಗವಹಿಸಿದ್ದರು.