26.3 C
Karnataka
Saturday, November 23, 2024

ರಾಜ್ಯದ ಆರ್ಥಿಕತೆ ಹಳ್ಳ ಹಿಡಿಸಿದ ಕಾಂಗ್ರೆಸ್‌ನಿಂದ ಸುಳ್ಳಿನ ಕಂತೆ: ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ

ಮಂಗಳೂರು: ಅಧಿಕಾರಕ್ಕೆ ಬಂದ ಕೇವಲ ನೂರು ದಿನಗಳಲ್ಲೇ ಆಡಳಿತ ವಿರೋಧಿ ಅಲೆಗೆ ಗುರಿಯಾಗಿರುವ ಸರಕಾರ ಯಾವುದಾದರೂ ಇದ್ದರೆ ಅದು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾತ್ರ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲೂ ಆಗದೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳ್ಳಹಿಡಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲಬೇಕು ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ ತಾಂಡವವಾಡುತ್ತದೆ. ದೇಶ ವಿರೋಧಿ ಶಕ್ತಿಗಳು ತಲೆ ಎತ್ತುತ್ತವೆ. ಬಿಜೆಪಿ ಸರಕಾರದ ಮೇಲೆ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಅದೇ ಕೆಂಪಯ್ಯನವರು ಸಿದ್ದರಾಮಯ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ನೆಪದಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಿ ಕರ್ನಾಟಕದ ಹಣವನ್ನು ಸುಲಿಗೆ ಮಾಡಿದ್ದಾರೆ. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ 42 ಕೋಟಿ ರೂ ಹಣ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉಮಾಪತಿ ಮನೆಯಲ್ಲಿ ಪತ್ತೆಯಾಗಿತ್ತು. ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಅವರು ವಾಗ್ದಾಳಿ ನಡೆಸಿದರು.
2014ರ ಮೊದಲು ತೆರಿಗೆ ರೂಪದಲ್ಲಿ ಕೇವಲ 28,000 ಕೋಟಿ ಹಣ ಕರ್ನಾಟಕಕ್ಕೆ ಕೊಡಲಾಗಿದೆ. 2014-24ರ ಅವಧಿಯಲ್ಲಿ 2,80,000 ಕೋಟಿ ಹಣ ನೀಡಲಾಗಿದೆ. ಹಾಗಿದ್ದರೂ ಹಿಂದಿ ವಿಚಾರ., ಕರ್ನಾಟಕದ ಅಸ್ಮಿತೆ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಟೀಕೆ ಮಾಡುತ್ತಾರೆ. ಒಂದು ಅವಕಾಶ ಕೊಟ್ಟರೆ ಬದಲಾವಣೆ ತರುತ್ತೇವೆ ಅನ್ನುತ್ತಾರೆ. ಐದು ದಶಕಗಳ ಕಾಲ ನಿರಂತರವಾಗಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ತಂದಿರುವ ಬದಲಾವಣೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅಶ್ವತ್ಥ ನಾರಾಯಣ ಟೀಕಿಸಿದರು.

ಕಾಂಗ್ರೆಸ್ ಪ್ರಣಾಳಿಕೆ ನಿಜಕ್ಕೂ ಕಾಂಗ್ರೆಸ್‌ನದ್ದೋ ಅಥವಾ ಇಂಡಿ ಒಕ್ಕೂಟದ್ದೋ ಎಂಬ ಪ್ರಶ್ನೆಯಿದೆ. ಏಕೆಂದರೆ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸುತ್ತಿರುವುದೇ ಕೇವಲ 200 ಕ್ಷೇತ್ರಗಳಲ್ಲಿ. ಆ ಎಲ್ಲ ಕ್ಷೇತ್ರಗಳಲ್ಲಿ ಗೆದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಾಗಿರುವಾಗ ಯಾವ ಧೈರ್ಯದ ಮೇಲೆ ಇಂತಹ ಭರವಸೆಗಳನ್ನು ನೀಡುತ್ತಿದೆ ಮತ್ತು ಕಾಂಗ್ರೆಸ್ ಇದು ತನ್ನ ಪ್ರಣಾಳಿಕೆ ಎಂದು ಹೇಳಿಕೊಳ್ಳುತ್ತದೆ?

ಕಾಂಗ್ರೆಸ್ ಸಮ ಪ್ರಮಾಣದಲ್ಲಿ ಸ್ಪರ್ಧೆಯನ್ನೇ ಮಾಡಿಲ್ಲ. ಆಗದೆ ಇರುವ ವಿಚಾರ ಮುಂದಿಟ್ಟುಕೊಂಡು, ರಾಜ್ಯದಲ್ಲಿ ಗ್ಯಾರಂಟಿ ಘೋಷಣೆ ಮಾಡಿದಂತೆ ಕೇಂದ್ರದಲ್ಲಿ ಮಾಡಲು ಹೊರಟಿದ್ದೀರಿ. ಪ್ರತಿ ಮಹಿಳೆಗೂ ವರ್ಷಕ್ಕೆ 1 ಲಕ್ಷ ರೂ ಕೊಡುತ್ತೇವೆ ಎಂದು ಹೇಳಿದ್ದಾರೆ. ಒಂದು ಕುಟುಂಬದ ಮಹಿಳೆಗೆ 1 ಲಕ್ಷ ರೂ ಅಂದರೆ ಒಟ್ಟಾರೆ 28-30 ಕೋಟಿ ಕುಟುಂಬಗಳಿಗೆ ಈ ಮೊತ್ತ ನೀಡಲು 25ರಿಂದ 30 ಲಕ್ಷ ಕೋಟಿ ರೂ ಬೇಕಾಗುತ್ತದೆ. ಕೇಂದ್ರ ಸರಕಾರದ ಬಜೆಟ್ ಗಾತ್ರವೇ 40 ಲಕ್ಷ ಕೋಟಿ ರೂ. ಹಾಗಿರುವಾಗ ಸುಳ್ಳು ಗ್ಯಾರಂಟಿಗಳನ್ನು ಈಡೇರಿಸಲು ಹಣವನ್ನು ಎಲ್ಲಿಂದ ತರುತ್ತೀರಿ. ಯಾವ ಸಂಪನ್ಮೂಲದಿಂದ ಹಣ ಜೋಡಿಸುತ್ತೀರಿ? ಹಣದ ಮೂಲ ಯಾವುದು ಅನ್ನುವ ಸ್ಪಷ್ಟನೆ ಕೊಡಬೇಕಲ್ಲ. ಸುಮ್ಮನೆ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಜನರರ ದಾರಿ ತಪ್ಪಿಸುವ ಕೆಲಸ ಮಾಡಿದರೆ ಹೇಗೆ? ದೇಶದ ಜನತೆಗೆ ಮಾಹಿತಿ ನೀಡಿ ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು 80 ಕೋಟಿ ಜನತೆಗೆ ಹಸಿವು ನೀಗಿಸುವಂತಹ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ 75 ಲಕ್ಷ ಮೆಟ್ಟಿಕ್ ಟನ್ ಆಹಾರ ಧಾನ್ಯ ಬಿಡುಗಡೆ ಮಾಡಿದ್ದಾರೆ. ಕೇಂದ್ರದಿಂದ ಕೊಟ್ಟಿರುವುದನ್ನೇ ತನ್ನದೆಂದು ಹೇಳಿಕೊಂಡು ಕಾಂಗ್ರೆಸ್ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಅವರು ದೂರಿದರು.
ಮೋದಿ ಸರಕಾರದಲ್ಲಿ ದೇಶದ ಅಭಿವೃದ್ಧಿ:
ಕಳೆದ 50 ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿ ಚಟುವಟಿಕೆಗಳು, 2014ರಿಂದ 2024ರ ವರೆಗೆ 10 ವರ್ಷಗಳ ನರೇಂದ್ರ ಸರಕಾರದ ಅವಧಿಯಲ್ಲಿ ಆಗಿವೆ. ಉದಾಹರಣೆಗೆ, ಬೆಂಗಳೂರು ಮೈಸೂರು-ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಸುಮಾರು 7,500 ಜನರಿಗೆ ಮೂರೂವರೆ ವರ್ಷಗಳ ಕಾಲ ಉದ್ಯೋಗ ದೊರೆತಿದೆ. ದೇಶದಲ್ಲಿ ಒಟ್ಟಾರೆ 5 ಲಕ್ಷ ಕೋಟಿ ರೂ.ಗಳು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಆಗಿದೆ. ಆ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಯೂ ಆಗಿದೆ ಎಂದು ಅವರು ವಿವರಿಸಿದರು.
ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ದಕ. ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ರವಿಶಂಕರ ಮಿಜಾರು ಹಾಗೂ ಬಿಜೆಪಿ ದ.ಕ ಕೋಶಾಧಿಕಾರಿ ಸಂಜಯ್ ಪ್ರಭು, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles