26.6 C
Karnataka
Thursday, November 21, 2024

ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಕಾರ್ಯಕ್ರಮ

ಮ೦ಗಳೂರು: “ಲೇಖಕರು ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಮತ್ತು ಸಂವೇದನಾಶೀಲತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಾಹಿತ್ಯ ಕೃ ತಿ ರಚಿಸಲು ಸಾಧ್ಯ. 25 ಮಿಲಿ ಸುಗಂದ ದ್ರವ್ಯ ತಯಾರಿಸಲು ಸಾವಿರಾರು ಹೂವಿನ ಪಕಳೆಗಳನ್ನು ಅರೆಯಬೇಕಾಗುತ್ತದೆಯೋ ಹಾಗೆ ಒಂದು ಸಾಹಿತ್ಯ ಕೃತಿ ರಚನೆಯ ಹಿಂದೆ ಸಾವಿರಾರು ಪುಟಗಳ ಓದು, ಅಭ್ಯಾಸ ಇರುತ್ತದೆ.” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಗೋವಾದ ಹಿರಿಯ ಸಾಹಿತಿ ದತ್ತಾ ದಾಮೋದರ ನಾಯಕ್ ಅಭಿಪ್ರಾಯಪಟ್ಟರು.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯಡಿ ಆಯ್ಕೆಯಾದ ಲೇಖಕರ ಬಳಗವನ್ನು ಉದ್ದೇಶಿಸಿ ಮಾತನಾಡಿದ ಅವರು
” ಬರವಣಿಗೆಯ ಭಾಷೆ ಸಾಧ್ಯವಾದಷ್ಟು ಸರಳ ಮತ್ತು ಹೃದ್ಯವಾದಾಗ ವಾಚಕನಿಗೆ ಓದುವ ಅನುಭೂತಿ ದಕ್ಕುತ್ತದೆ. ಅತಿಯಾದ ಅಲಂಕಾರ, ಸಾಂಕೇತಿಕತೆ, ಪ್ರತಿಮೆ – ಪ್ರತೀಕಗಳನ್ನು ಹೇರಿಕೊಂದು ರಚಿಸಿದ ಸಾಹಿತ್ಯ ಕೃತಿಯಿಂದ ಓದುಗರು ವಿಮುಖರಾಗುವ ಸಾಧ್ಯತೆಗಳು ಹೆಚ್ಚು. ಓದುಗ ಪುಸ್ತಕ ಓದುವುದು ಅವನ ಸುಖಕ್ಕಾಗಿ ಹೊರತು ನಮಗಾಗಿ ಅಲ್ಲ ಎಂಬುದನ್ನು ಪುಸ್ತಕ ಲೇಖಕರೂ, ಪ್ರಕಾಶಕರೂ ಅರ್ಥ ಮಾಡಿಕೊಳ್ಳಬೇಕು ಎ೦ದು ದತ್ತಾ ನಾಯಕ್ ಸಲಹೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ್ ಶೆಣೈಯವರ ಪ್ರತಿಮೆಗೆ ಹಾರಾರ್ಪಣೆ ಮತ್ತು ದೀಪ ಪ್ರಜ್ವಲನೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಚ್ಚೆಮ್ ಪೆರ್ನಾಲ್ ಅಧ್ಯಕ್ಷತೆಯಲ್ಲಿ ನಡೆದ “ಪುಸ್ತಕ ಪಂಚಾತಿಕೆ” ಎಂಬ ಸಂವಾದ ಕಾರ್ಯಕ್ರಮ ನಡೆಯಿತು. ಹಿರಿಯ ಲೇಖಕಶಕುಂತಲಾ ಆರ್. ಕಿಣಿ, ಶ್ರೀ ಎಡ್ಡಿ ಸಿಕ್ವೇರಾ ಲೇಖಕರ ಪರವಾಗಿ, ಪಯ್ಯನ್ನೂರು ರಮೇಶ ಪೈ ಮತ್ತು ಸಂತ ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ಡೊ| ವಿದ್ಯಾ ವಿನುತ ಡಿಸೊಜ ಪ್ರಕಾಶಕರ ಪರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪುಸ್ತಕ ಪ್ರಕಾಶನ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಲೇಖಕ ಮತ್ತು ಪ್ರಕಾಶಕರ ಜವಾಬ್ದಾರಿ, ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಲಭ್ಯವಿರುವ ಪರಿಹಾರ ಮಾರ್ಗೋಪಾಯಗಳ ಕುರಿತು ಸಂವಾದದಲ್ಲಿ ಮುಖ್ತವಾಗಿ ಚರ್ಚಿಸಲಾಯಿತು.

ವಿಶ್ವ ಕೊಂಕಣಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಸಂಪಾದಕ ಮಂಡಳಿ ಸದಸ್ಯ ಕವಿ/ ಚಿಂತಕ ಟೈಟಸ್ ನೊರೊನ್ಹಾ ಅತಿಥಿಗಳನ್ನು ಪರಿಚಯಿಸಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಕಾರ್ಯಕ್ರಮದ ಕುರಿತು ವಿಸ್ತಾರ ಮಾಹಿತಿಯನ್ನು ನೀಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಹಾಗೂ ಸಂಪಾದಕ ಮಂಡಳಿ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್ ಪುಸ್ತಕ ಅನುದಾನಕ್ಕೆ ಆಯ್ಕೆಯಾದ ಕೃತಿ ಮತ್ತು ಲೇಖಕರ ಹೆಸರುಗಳ ಘೋಷಣೆ ಮಾಡಿದರು. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮಾತ್ರವಲ್ಲ ದೂರದ ಆಸ್ಟ್ರೇಲಿಯಾದಿಂದಲೂ ಕೊಂಕಣಿ ಸಾಹಿತಿಗಳ 21 ಕೃತಿಗಳು ಅನುದಾನಕ್ಕೆ ಆಯ್ಕೆಯಾಗಿದ್ದು, ಸಾಹಿತಿಗಳು ಮತ್ತು ಅವರ ಪ್ರತಿನಿಧಿಗಳು ಹಾಜರಿದ್ದು ಪ್ರಸ್ತಾಪಕ್ಕೆ ಸಹಿ ಮಾಡಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರೂ, ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಕಾರ್ಯಕ್ರಮದ ನಿರ್ದೇಶಕರೂ ಆಗಿರುವ ಸಿಎ. ನಂದಗೋಪಾಲ ಶೆಣೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ” ಕೊಂಕಣಿ ಸಾಹಿತ್ಯಕ್ಕೆ ಉತ್ತೇಜನ ನಿಡುವುದು ಮತ್ತು ಆ ಮೂಲಕ ಕೊಂಕಣಿ ಭಾಷಾ ಸೇವೆ ಮಾಡುವುದು ವಿಶ್ವ ಕೊಂಕಣಿ ಕೇಂದ್ರದ ಮೂಲ ಉದ್ದೇಶಗಳಲ್ಲಿ ಒಂದು. ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಕಾರ್ಯಕ್ರಮದ ಮೂಲಕ ಈ ಉದ್ದೇಶವನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ವಿಶ್ವ ಕೊಂಕಣಿ ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು ಈ ಕಾರ್ಯಕ್ರಮ ನೂರು ಪುಸ್ತಕ ಪ್ರಕಟಣೆಗೆ ಸೀಮಿತಗೊಳಿಸುವುದಿಲ್ಲ, ಮುಂದುವರೆಸಿಕೊಂಡು ಹೋಗುತ್ತೇವೆ ” ಎಂದು ಭರವಸೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿ ಸೊಜಾ ವಂದಿಸಿದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥರಾದ ವಿಲಿಯಮ್ ಡಿ ಸೊಜಾ, ಡಾ| ಕಸ್ತೂರಿ ಮೋಹನ್ ಪೈ, ಖಜಾಂಜಿ ಬಿ. ಆರ್. ಭಟ್ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ ಡಾ| ಬಿ. ದೇವದಾಸ ಪೈ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles