23.2 C
Karnataka
Friday, November 22, 2024

ಏ.14ರಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ರ್‍ಯಾಲಿ

ಮಂಗಳೂರು: ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.

ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಚುನಾವಣಾ ಸಮಿತಿಯ ಪ್ರಧಾನ ಸಂಚಾಲಕರ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ದ.ಕ ಜಿಲ್ಲೆಗೆ ಹಿಂದಿನ ಬಾರಿ ಮೋದಿ ಅವರು ಭೇಟಿ ನೀಡಿದಾಗ ಸೇರಿದ ಜನತೆಯ ದಾಖಲೆ ಮೀರಿಸುವಂತೆ ಈ ಬಾರಿ ಜನರು ಸಮಾವೇಶಗೊಳ್ಳಲಿದ್ದಾರೆ. ಪ್ರಧಾನಿ ಭೇಟಿಯಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದೆ. ಅನಂತರ ಮೂರು ದಿನಗಳ ಕಾಲ ಅಂದರೆ ಏ.15,16, 17ರಂದು ಪಕ್ಷದ ರಾಜ್ಯಾಧ್ಯಕ್ಷರಿಂದ ತೊಡಗಿ ಎಲ್ಲ ಪ್ರಮುಖರು, ಅಭ್ಯರ್ಥಿಗಳು, ಕಾರ್ಯಕರ್ತರು ಮನೆ ಮನೆ ಸಂಪರ್ಕ ಹಾಗೂ ಪ್ರಚಾರ ನಡೆಸಲಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.

ಏ.10, 11ರಂದು ಪಕ್ಷವು ಬೂತ್ ಮಟ್ಟದ ಮಹಾ ಪ್ರಚಾರ ಅಭಿಯಾನ ಕೈಗೊಳ್ಳಲಿದ್ದು,, ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ 15, 16, 17ರಂದು ಮನೆ ಮನೆ ಸಂಪರ್ಕ ಅಭಿಯಾನ ನಡೆಯುತ್ತದೆ. ಈ ಬಾರಿ ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತತ್ತು ವಿಕಸಿತ ಭಾರತ ಎಂಬ ಮೂರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ ಎಂದು ಸುನಿಲ್ ಕುಮಾರ್ ವಿವರಿಸಿದರು.
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿ ಮೊದಲ ಹಂತದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದೀಗ ಪ್ರಧಾನಿ ಮೋದಿ ಅವರ ಪ್ರವಾಸದ ಮೂಲಕ ಎರಡನೇ ಹಂತದ ಪ್ರಚಾರ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಏ.14ರಂದು ಮಂಗಳೂರಿನ ಸಮಾವೇಶ ಮುಗಿದ ಬಳಿಕ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಬೃಹತ್ ರೋಡ್‌ಶೋ ನಡೆಸಲಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರು ಅಸಹಕಾರ ತೋರುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸವಾಲು ಎದುರಾಗಿಲ್ಲವೇ ಎಂಬ ಪರ್ತಕರ್ತರ ಪ್ರಶ್ನೆಗೆ, ಹಾಗೇನೂ ಇಲ್ಲ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣೆಗೆ ಹೋಗುತ್ತೇವೆ. ಕಾಗೇರಿಯವರ ನಾಮಪತ್ರ ಸಲ್ಲಿಕೆ ಸಂದರ್ಭ ನಾನೂ ಹಾಜರಿರುತ್ತೇನೆ ಎಂದು ಸುನಿಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಆರುವಾರ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles