ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು.
ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭಿಸಿದರು. ರೋಡ್ ಶೋ, ವಿಟ್ಲ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ಬಳಿಕ ವಿಟ್ಲ ಸಂತೆ ಮಾರುಕಟ್ಟೆಗೆ ತೆರಳಿ ಮತ ಯಾಚನೆ ನಡೆಸಿದರು.ರೋಡ್ ಶೋ ಉದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭ್ಯರ್ಥಿಗೆ ಸಾಥ್ ನೀಡಿದರು.
ಪದ್ಮರಾಜ್ ಆರ್. ಪೂಜಾರಿ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಮೂಲಸೌಕರ್ಯ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡಿರುವುದು ಕಾಂಗ್ರೆಸ್ ಪಕ್ಷದ ಸಂಸದರು. ಆದರೆ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಸಂಸದರು, ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದೆ. ಮುಂದೆ ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಉದ್ಯೋಗ ಸೃಷ್ಟಿ, ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುವುದು ಎಂದರು. ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡಿ ಕಾಂಗ್ರೆಸ್ ಜನಪರ, ಅಭಿವೃದ್ಧಿ ಪರ ಸರಕಾರ ಎಂಬುದನ್ನು ರಾಜ್ಯ ಸರಕಾರ ನಿರೂಪಿಸಿ ತೋರಿಸಿದೆ. ಈ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆ ಆಗಲಿದೆ ಎಂದರು.
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಅರಮನೆ, ವಿಟ್ಲ ಕೇಂದ್ರ ಜುಮ್ಮಾ ಮಸೀದಿ, ವಿಟ್ಲ ಶೋಕಮಾತಾ ದೇವಾಲಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಆಶೀರ್ವಾದ ಪಡೆದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಸ್ತುವಾರಿ ರಮನಾಥ ವಿಟ್ಲ, ಕಾವು ಹೇಮನಾಥ ಶೆಟ್ಟಿ, ವಿಟ್ಲ ಅರಮನೆಯ ಕೃಷ್ಣಯ್ಯ, ಜಯಪ್ರಕಾಶ್ ಬದಿನಾರು, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಪಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ವಿಜಯ ಕುಮಾರ್ ಆಳ್ವ, ವೇದನಾಥ ಸುವರ್ಣ, ಮಸೀದಿ ಸದರ್ ಅಬ್ದುಲ್ಲಾ ದಾರಿಮಿ, ವಿಟ್ಲ ಜಮಾತ್ ಅಧ್ಯಕ್ಷ ಮಹಮ್ಮದ್ ಅಶ್ರಫ್ ಪೊನ್ನೊಟ್ಟು, ಕಮಿಟಿ ಸದಸ್ಯ ರಶೀದ್ ವಿಟ್ಲ, ಅಜೀಜ್ ಹಳೆಮನೆ, ಮಹಮ್ಮದ್ ಇಕ್ಬಾಲ್, ವಿ.ಕೆ. ಹಂಝ, ನಜೀರ್ ಮಠ, ಚರ್ಚ್ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್, ವಿಜಯ್ ಪಾಯಸ್ ಥೋಮಸ್ ಮಸ್ಕರೇನಸ್, ಲೂಯಿಸ್ ಮಸ್ಕರೇನಸ್, ಜೆಸಿಂತಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.