21.4 C
Karnataka
Tuesday, December 3, 2024

ಮುಗಿದ ಚುನಾವಣಾ ಹವಾ.. ಗೆಲುವಿನ ಮೆಥಾಮೆಟಿಕ್ಸ್‌ ಆರಂಭ

ಮಂಗಳೂರು : ಕರಾವಳಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಬಿಸಿಯೇರಿದ್ದ ಚುನಾವಣಾ ಹವಾ ತಣ್ಣಾಗಾಗಿದೆ. ಜೂ. 4 ರ ಮತಎಣಿಕೆಯತ್ತ ಎಲ್ಲರ ಗಮನ ಕೇಂದ್ರೀಕೃತಗೊಂಡಿದೆ. ಮತಯಂತ್ರದೊಳಗೆ ಭದ್ರವಾಗಿರುವ ಜನಾದೇಶ ಪ್ರಕಟಗೊಳ್ಳಲು ಇನ್ನು ಬರೋಬ್ಬರಿ 37 ದಿನಗಳು ಬಾಕಿ ಉಳಿದಿದ್ದು ಸೋಲು ಗೆಲುವಿನ ಬಗ್ಗೆ ಲೆಕ್ಕಚಾರ, ವಿಶ್ಲೇಷಣೆಗಳು ಆರಂಭಗೊಂಡಿದೆ.
ಕರಾವಳಿ ಕಡುಬೇಸಿಗೆಯ ಬಿಸಿಲ ಬೇಗೆಯನ್ನು ಚುನಾವಣಾ ಕಾವು ಇನ್ನಷ್ಟು ಗರಂಗೊಳಿಸಿತ್ತು. ಮತದಾರರ ಮನಸ್ಸು ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತು, ಕಾರ್ಯತಂತ್ರಗಳನ್ನು ಅನುಸರಿಸಿದ್ದವು. ಆರೋಪ ಪ್ರತ್ಯಾರೋಪ , ವಾದ ವಿವಾದ, ಭರವಸೆ,ಆಶ್ವಾಸನೆಗಳು ಚುನಾವಣಾ ಪ್ರಚಾರ ಕಣದಲ್ಲಿ ಸಾಕಾಷ್ಟು ಹರಿದಾಡಿದ್ದವು. ಬಹಿರಂಗ ಪ್ರಚಾರ, ರೋಡ್‌ಶೋಗಳು ಚುನಾವಣಾ ಕಣವನ್ನು ರಂಗೇರಿಸಿತ್ತು. ಮತದಾರರ ಮನೆಯೆಡೆಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡಿಗೆ ಸಾಗಿತ್ತು. ಒಂದಷ್ಟು ಪ್ರಭಾವಿ ನಾಯಕರು ಜಿಲ್ಲೆಗೆ ಆಗಮಿಸಿ ರಾಜಕೀಯ ಸಂಚಲನ ಮೂಡಿಸಿದ್ದರು. ರಾಜಕೀಯ ಪಕ್ಷಗಳು,ಬೆಂಬಲಿಗ ಸಂಘಟನೆಗಳಿಂದ ಸರಣಿ ಪತ್ರಿಕಾಗೋಷ್ಠಿಗಳು ಆಯೋಜನೆಗೊಂಡಿದ್ದವು. ಎ.೨೬ರಂದು ಮತದಾನ ನಡೆಯುವುದರ ಜತೆಗೆ ಇದೆಲ್ಲದಕ್ಕೂ ತೆರೆಬಿದ್ದಿದೆ.ಕಳೆದ ಒಂದು ತಿಂಗಳಿನಿಂದ ಸದ್ದುಗದ್ದಲದ ರಾಜಕೀಯ ವಾತಾವರಣ ಇದೀಗ ಮೌನಕ್ಕೆ ಜಾರಿದೆ.
ದಾಖಲೆ ಮತದಾನ; ಗೆಲುವಿನ ಲೆಕ್ಕಚಾರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇ.77.56 ಮತದಾನವಾಗಿದೆ. ಸುಳ್ಯದಲ್ಲಿ ಶೇ.83.೦1 ಮತದಾನವಾಗಿದ್ದು ಜಿಲ್ಲೆಯಲ್ಲಿ ಮತದಾನದ ತನ್ನ ಪಾರಮ್ಯವನ್ನು ಉಳಿಸಿಕೊಂಡಿದೆ. ಹೆಚ್ಚಿದ ಮತದಾನ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಟ್ರೆಂಡ್‌ಗಳನ್ನು ಮೂಲವಾಗಿಟ್ಟುಕೊಂಡು ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಗಳು ಆರಂಭಗೊಂಡಿದೆ.
ಬೂತ್‌ಮಟ್ಟದಲ್ಲಿ ಲೆಕ್ಕಚಾರ
ಕ್ಷೇತ್ರದ ಎಲ್ಲಾ 1876 ಬೂತ್‌ಗಳ ಮತದಾರರ ಪಟ್ಟಿಯನ್ನು ಹಿಡಿದುಕೊ೦ಡು ಕೂಡಿಸಿ ಕಳೆಯುವ ಗಣಿತ ಲೆಕ್ಕಚಾರ ನಡೆಯುತ್ತಿದೆ. ಪ್ರತಿಯೊಂದು ಬೂತ್‌ನಲ್ಲಿ ತಮ್ಮ ಪಕ್ಷಕ್ಕೆ ಬರುವ ಪಕ್ಕಾ ಮತಗಳು, ಎದುರಾಳಿ ಅಭ್ಯರ್ಥಿಗೆ ಹೋಗಿರುವ ಮತದಾನಗಳು, ಶೇ.50-50ರ ಅಂಚಿನಲ್ಲಿರುವ ಮತಗಳನ್ನು ಅಂದಾಜಿಸಿ ಗಳಿಸಿರಬಹುದಾದ ಮತಗಳ ಲೆಕ್ಕ ಹಾಕುವ ಕಾರ್ಯ ಆರಂಭಗೊಂಡಿದೆ. ಇವುಗಳನ್ನು ಕ್ರೋಢಿಕರಿಸಿ ಗೆಲುವಿನ ಸಾಧ್ಯತೆ, ಅಂತರಗಳ ಒಟ್ಟು ಚಿತ್ರಣವೊಂದನ್ನು ಅಂದಾಜಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಬ್ಯುಸಿಯಾಗಿವೆ.
ಇನ್ನೊಂದೆಡೆ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಮತದಾರರಲ್ಲೂ ಕುತೂಹಲ ಗರಿಗೆದರಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳು, ಇತರ ಕಾರ್ಯಕ್ರಮಗಳಲ್ಲಿ ಮತದಾನೋತ್ತರ ಚರ್ಚೆಗಳು ನಡೆಯುತ್ತಿವೆ. ಯಾರು ಗೆಲ್ಲಬಹುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆರಂ‘ವಾಗುವ ಚರ್ಚೆ ಒಂದಷ್ಟು ರಾಜಕೀಯ ವಿಶ್ಲೇಷಣೆಗಳ ಜತೆ ಮುಕ್ತಾಯವಾಗುತ್ತಿವೆ.
ವಿಧಾನಸಭಾ ಕ್ಷೇತ್ರವಾರು ಹಿಂದಿನ ಲೋಕಸಭಾ ಚುನಾವಣೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಆಗಿರುವ ಶೇಕಡವಾರು ಮತದಾನ,ರಾಜಕೀಯ ಪಕ್ಷಗಳು ಗಳಿಸಿದ ಮತಗಳು ಮತ್ತು ಗೆಲುವಿನ ಅಂತರಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ವಿಶ್ಲೇಷಕರು ತಮ್ಮದೆ ಆದ ವಿಶ್ಲೇಷಣೆಯಲ್ಲಿ ನಿರತರಾಗಿದ್ದಾರೆ.

ಹರಕೆ , ಹಾರೈಕೆ
ಪ್ರಚಾರದ ಸಂದಭ೯ದಲ್ಲಿ ಅಭ್ಯರ್ಥಿಗಳಿಂದ ಟೆಂಪಲ್ ರನ್ ನಡೆದಿದ್ದರೆ ಮತದಾನದ ಬಳಿಕ ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಹರಕೆ ಪರ್ವ ಆರಂಭಗೊಂಡಿದೆ. ತಮ್ಮ ಅಭ್ಯರ್ಥಿ ಗೆದ್ದರೆ ದೇವರಿಗೆ , ದೈವಗಳಿಗೆ ವಿವಿಧ ರೀತಿಯ ಹರಕೆಗಳನ್ನು ಹೇಳಿ ಕಾರ್ಯಕರ್ತರು, ಬೆಂಬಲಿಗರು ಪ್ರಾರ್ಥನೆ ಸಲ್ಲಿಸುವ ಕಾರ್ಯ ಇದೀಗ ನಡೆಯುತ್ತಿದೆ. ಇದರಲ್ಲಿ 1000 ರೂ.ನಿಂದ ಲಕ್ಷಗಟ್ಟಲೆ ರೂ.ವೆಚ್ಚದವರೆಗಿನ ಹರಕೆಗಳು ಸೇರಿಕೊಂಡಿವೆ. ಜತೆಗೆ ಬೆಟ್ಟಿಂಗ್ ಕೂಡಾ ನಿಧಾನವಾಗಿ ಗರಿಗೆದರಲು ಆರಂಭಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles